ಇತ್ತೀಚಿನ ದಿನಗಳಲ್ಲಿ ಪ್ರತಿ ಸಿನಿಮಾಗಳನ್ನೂ ಸೆನ್ಸಾರ್ ಮಂಡಳಿಯವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ‘ಆದಿಪುರುಷ್’, ‘ಆಪನ್ಹೈಮರ್’ ಮುಂತಾದ ಸಿನಿಮಾಗಳ ದೃಶ್ಯಗಳಿಗೆ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ದಿನದಿನಕ್ಕೂ ನಿಯಮಗಳು ಕಠಿಣವಾಗುತ್ತಿವೆ. ಹಿಂದಿಯ ‘ಒಎಂಜಿ 2’ ಸಿನಿಮಾ ಕೂಡ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ಕಷ್ಟಪಡುತ್ತಿದೆ. ಅದೇ ರೀತಿ ಕನ್ನಡದ ‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾಗೂ ಸಹ ಪ್ರಮಾಣಪತ್ರ ಸಿಗುವುದು ಕಷ್ಟ ಆಗಿತ್ತು. ಆದರೆ ಬೆಂಗಳೂರಿನಲ್ಲಿ ಸೆನ್ಸಾರ್ ಆಗಲಿಲ್ಲ ಎಂಬ ಕಾರಣಕ್ಕೆ ಹೈದರಾಬಾದ್ಗೆ ತೆರಳಿತ್ತು ಚಿತ್ರತಂಡ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾಗೆ ರವಿ ಸುಬ್ಬರಾವ್ ಅವರು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಸಮಸ್ಯೆ ಆಗುವಂಥದ್ದು ಈ ಚಿತ್ರದಲ್ಲಿ ಏನಿದೆ? ಈ ಪ್ರಶ್ನೆಗೆ ನಿರ್ದೇಶಕ ರವಿ ಸುಬ್ಬರಾವ್ ಉತ್ತರ ನೀಡಿದ್ದಾರೆ. ‘ಅನೇಕ ಸನ್ನಿವೇಶಗಳನ್ನು ನಾವು ನೈಜವಾಗಿ ಶೂಟ್ ಮಾಡಿದ್ದೇವೆ. ಆದ್ದರಿಂದ ಕರ್ನಾಟಕದಲ್ಲಿ ನಮಗೆ ಸೆನ್ಸಾರ್ ಮಾಡಿಸಲು ಸಾಧ್ಯವಾಗಲಿಲ್ಲ. ಬಳಿಕ ನಾವು ಹೈದರಾಬಾದ್ನಲ್ಲಿ ಸಿನಿಮಾದ ಸೆನ್ಸಾರ್ ಮಾಡಿಸಿದೆವು. ಅಲ್ಲಿನ ಸೆನ್ಸಾರ್ ಬೋರ್ಡ್ ಸದಸ್ಯರು ಕೆಲವು ಕಡೆಗಳಿಗೆ ಕತ್ತರಿ ಹಾಕಲು ಸೂಚಿಸಿ, ಎ ಪ್ರಮಾಣಪ್ರತ್ರ ನೀಡಿದ್ದಾರೆ’ ಎಂದಿದ್ದಾರೆ ರವಿ ಸುಬ್ಬರಾವ್.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ರವಿ ಸುಬ್ಬರಾವ್ ಅವರೇ ನಿಭಾಯಿಸಿದ್ದಾರೆ. ಅವರು ತಮ್ಮ ಸ್ನೇಹಿತರಾದ ರಿತೇಶ್ ಜೋಶಿ ಜೊತೆ ಸೇರಿ ಬಂಡವಾಳವನ್ನೂ ಹೂಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಪಾತ್ರವನ್ನು ಕೂಡ ರವಿ ಅವರೇ ನಿಭಾಯಿಸಿದ್ದಾರೆ. ಅಂದಹಾಗೆ ಈಗ ಬಿಡುಗಡೆಗೆ ಸಿದ್ಧವಾಗಿರುವುದು ಮೊದಲ ಭಾಗ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆ ಕುರಿತು ಮಾಹಿತಿ ಹಂಚಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ ಭಾಗ 1’ ಸಿನಿಮಾ ತಂಡ.
ರವಿ ಸುಬ್ಬರಾವ್ ಅವರು ತಮ್ಮ ರಿಯಲ್ ಲೈಫ್ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಕೂಡ ಡಿಫರೆಂಟ್ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ರಾಧಿಕಾ ರಾಮ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ತುಂಬ ಬೋಲ್ಡ್ ಆಗಿದೆ. ಅನಿಲ್ ಸಿ.ಜೆ. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಜೂಜು ಹಾಗೂ ಬೆಟ್ಟಿಂಗ್ ಮಾಫಿಯಾ ಕುರಿತು ಕಥೆ ಹೆಣೆಯಲಾಗಿದೆ. ಈ ಮಾಫಿಯಾದ ಮೂಲಕ ನಾಯಕನು ಯುವಜನರನ್ನು ಮೋಸದ ಬಲೆಗೆ ಬೀಳಿಸುತ್ತಾನೆ. ಈ ಕಾಲದ ಹುಡುಗರು ಮನೆಯಲ್ಲಿರುವ ರೀತಿಯೇ ಬೇರೆ. ಹೊರಗಡೆ ವರ್ತಿಸುವ ರೀತಿಯೇ ಬೇರೆ. ಅದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಹೇಳಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ.