ಚಿಕ್ಕಬಾಣಾವರ ರೈಲ್ವೆ ಕೆಳಸೇತುವೆ ದುರಸ್ತಿ: ಹೆಸರಘಟ್ಟ-ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್​​ ಮಾರ್ಗದಲ್ಲಿ ಬಿಎಂಟಿಸಿ ಸಂಚಾರ ನಿರ್ಬಂಧ

ಬೆಂಗಳೂರು: ಚಿಕ್ಕಬಾಣಾವರ ರೈಲ್ವೆ ಕೆಳಸೇತುವೆ ದುರಸ್ತಿ ಹಿನ್ನೆಲೆ ಹೆಸರಘಟ್ಟ-ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್​​ ಮಾರ್ಗದಲ್ಲಿ ತಾತ್ಕಾಲಿಕವಾಗಿ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಸ್​ಗಳು ಕೆರೆಗುಡ್ಡದಹಳ್ಳಿ, ಅಬ್ಬಿಗೆರೆ, ಕೆ.ಜಿ.ಹಳ್ಳಿ ಮಾರ್ಗದ ಮೂಲಕ ಚಿಕ್ಕಬಾಣಾವರ ಬಸ್​ ನಿಲ್ದಾಣಕ್ಕೆ ತೆರಳುತ್ತವೆ ಹಾಗೂ ಚಿಕ್ಕ ಬಾಣಾವರ ಕೊನೆಗೊಳ್ಳುವ ಬಸ್​ಗಳು ಜನಪ್ರಿಯ ಹತ್ತಿರ ಕೊನೆಗೊಳ್ಳಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಕಾಮಗಾರಿ ಚಿಕ್ಕಬಾಣಾವರ ರೈಲ್ವೇ ಕೆಳಸೇತುವೆ ದುರಸ್ತಿ ಕಾರ್ಯಕ್ಕೆ ಪಿಡ್ಲೂಡಿ ಇಲಾಖೆ ಮುಂದಾಗಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ಸ್ಥಗಿತವಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು 10 ದಿನಗಳ ಕಾಲ ಸಮಯ ನಿಗದಿಪಡಿಸಲಾಗಿದೆ.

ಅಲ್ಲಿಯವರೆಗೂ ಹೆಸರಘಟ್ಟ ದಿಂದ ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್ ಹೋಗುವ ಬಸ್ ಗಳನ್ನು ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಹೋಗಲು ಅವಕಾಶ ನೀಡಲಾಗಿದೆ. ತಾತ್ಕಾಲಿಕವಾಗಿ ಕೆರಗುಡ್ಡದಹಳ್ಳಿ, ಅಬ್ಬಿಗೆರೆ, ಕೆಜಿ ಹಳ್ಳಿ ಮಾರ್ಗದಿಂದಲೂ ಹೋಗಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಬಾಣಾವರ ಕೊನೆಗೊಳ್ಳುವ ಬಸ್​​ಗಳು ಜನಪ್ರಿಯ ಹತ್ತಿರ ಕೊನೆಗೊಳ್ಳಲಿದೆ.

ನಮ್ಮ ಮೆಟ್ರೋ ಬ್ಲ್ಯೂ ಲೈನ್ ಕಾಮಗಾರಿ ಆರಂಭ; ನಿಧಾನಗತಿ ಸಂಚಾರಕ್ಕೆ ಸೂಚನೆ

ನೀಲಿ (ಬ್ಲ್ಯೂ ಲೈನ್) ಮಾರ್ಗದ ಪಿಲ್ಲರ್ ಕೆಲಸ ಶುರುವಾಗಿದ್ದು, ದೇವರಬೀಸನಹಳ್ಳಿ ಬಳಿ ನಿಧಾನಗತಿಯ ಸಂಚಾರ ಇರಲಿದೆ.ದೇವರಬೀಸನಹಳ್ಳಿ ಮೇಲ್ಸೇತುವೆ ಬಳಿ ಮೆಟ್ರೊ ಪಿಲ್ಲರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಸೋಮವಾರದಿಂದ ಬೆಳಗ್ಗೆ ಮತ್ತು ಸಂಜೆಯ ದಟ್ಟಣೆಯ ವೇಳೆಯಲ್ಲಿ ನಿಧಾನಗತಿಯ ಸಂಚಾರಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಇನ್ನು ಮೆಟ್ರೋ ಪಿಲ್ಲರ್ ನಿರ್ಮಾಣ ಕಾಮಗಾರಿ ಸೋಮವಾರದಿಂದ ಆರಂಭವಾಗುವುದರಿಂದ ದೇವರಬೀಸನಹಳ್ಳಿ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಮೇಲ್ಸೇತುವೆಯಲ್ಲಿ ನಿಧಾನಗತಿಯಲ್ಲಿ ಸಾಗಬೇಕು ಎಂದು ಸೂಚಿಸಿದ್ದಾರೆ. ಪ್ರಯಾಣಿಕರು ದಯವಿಟ್ಟು ನಮ್ಮೊಂದಿಗೆ ಸಹಕರಿಸಿ ಎಂದು ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮೆಟ್ರೋ ಕಾಮಗಾರಿಯು ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಕೆಆರ್ ಪುರ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೊರ ವರ್ತುಲ ರಸ್ತೆ ಎರಡೂ ಬದಿಯಲ್ಲಿ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ನಡುವೆ ಮೆಟ್ರೊ ನಿಲ್ದಾಣದ ಪಿಲ್ಲರ್ ಕೆಲಸ ಪ್ರಾರಂಭವಾಗಿದೆ. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಸಂಚಾರ ಪೊಲೀಸರು ಬ್ಯಾರಿಕೇಡ್ ಅಳವಡಿಸಲಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.