ಮುಂಬೈ: ಪೊಲೀಸ್ ಕಮಿಷನರ್ (ACP) ಒಬ್ಬರು ಪತ್ನಿ ಹಾಗೂ ಸೋದರಳಿಯನಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತರನ್ನು ಪೊಲೀಸ್ ಅಧಿಕಾರಿಯ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಹಾಗೂ ಭರತ್ ಗಾಯಕ್ವಾಡ್ (57) ಎನ್ನಲಾಗಿದೆ. ಎಸಿಪಿ ಭರತ್ ಗಾಯಕ್ವಾಡ್ ಬೆಳಗ್ಗಿನ ಜಾವ 3.30ರ ಸುಮಾರಿಗೆ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಬಂದೂಕಿನಿಂದ ಬಂದ ಸ್ಫೋಟದ ಸದ್ದಿಗೆ ಎಸಿಪಿ ಮಗ ಹಾಗೂ ಸೋದರಳಿಯ ಪಕ್ಕದ ರೋಮ್‍ನಿಂದ ಎದ್ದು ಬಂದಿದ್ದಾರೆ. ಈ ವೇಳೆ ಸೋದರಳಿಯನ ಮೇಲೂ ಗುಂಡು ಹಾರಿಸಲಾಗಿದೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಘಟನೆಯ ಕಾರಣ ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಚತುಶೃರ್ಂಗಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಅವರು ಮನೆಗೆ ಬಂದಿದ್ದರು, ಈ ವೇಳೆ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡರು ಎಂಬುದು ತಿಳಿಯುತ್ತಿಲ್ಲ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.