ಕೇರವಾಡದ ಕರೆ ಒಡೆಯುವ ಸಾಧ್ಯತೆ : ತುರ್ತು ಕ್ರಮಕ್ಕೆ‌ ಮುಂದಾದ ತಾಲ್ಲೂಕಾಡಳಿತ

ದಾಂಡೇಲಿ : ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದ ಕೆರೆ ಕಳೆದ ವರ್ಷದಂತೆ ಈ ವರ್ಷವೂ ತುಂಬಿದ್ದು, ಯಾವುದೇ ಸಂದರ್ಭದಲ್ಲಿ ಕೆರೆ ಒಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದಾಂಡೇಲಿ ತಾಲೂಕಾಡಳಿತ ಸ್ಥಳೀಯ ಆಲೂರು ಗ್ರಾಮ ಪಂಚಾಯತ್ ಮೂಲಕ ಕೆರೆಗೆ ಸಂಬಂಧಿಸಿದ ಕಾಲುವೆಯನ್ನು ಅಗಲೀಕರಣಗೊಳಿಸುವ ಕಾರ್ಯಕ್ಕೆ ಭಾನುವಾರ ಚಾಲನೆಯನ್ನು ನೀಡಿದೆ.

ಕಳೆದ ವರ್ಷವೂ ಇಲ್ಲಿಯ ಕೆರೆ ತುಂಬಿ ಹೊಡೆದ ಪರಿಣಾಮವಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇರವಾಡದ ಕೆರೆ ತುಂಬಿದ್ದು, ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಸುಭಾಷ್ ಭೋವಿವಡ್ಡರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರು.

ಅಂತೆಯೇ ಸ್ಥಳಕ್ಕಾಗಮಿಸಿದ ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಆಲೂರು ಗ್ರಾಮ ಪಂಚಾಯತಿಯಡಿ ಜೆಸಿಬಿಯ ಮೂಲಕ ಕೆರೆಯ ಕಾಲುವೆಯನ್ನು ಅಗಲೀಕರಣಗೊಳಿಸುವ ಕಾರ್ಯವನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಸುಭಾಷ್ ಬೋವಿವಡ್ಡರ್, ನಾಗರತ್ನಾ, ನೂರಜಾನ ನದಾಫ್, ಗ್ರಾಮ ಪಂಚಾಯತ್ ಪಿ.ಡಿ.ಓ ಸಂತೋಷ್, ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಕಾಲುವೆ ಅಗಲೀಕರಣಗೊಳಿಸಿದರೂ ಯಾವುದೇ ಸಂದರ್ಭದಲ್ಲಿ ಕೆರೆ ಒಡೆಯಬಹುದಾದ ಸಾಧ್ಯತೆ ಸ್ಪಷ್ಟವಾದ ತೊಡಗಿದೆ.