ಹಳಿಯಾಳ : ಹಳಿಯಾಳ – ಚಿಬ್ಬಲಗೇರಿ ರಸ್ತೆಯಲ್ಲಿ ಬರುವ ಅಲ್ಲೊಳ್ಳಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮವಾಗಿ ಅಲ್ಲೊಳ್ಳಿ, ಚಿಬ್ಬಲಗಿರಿ ಸೇರಿದಂತೆ ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಜಲಾವೃತಗೊಂಡ ಹಿನ್ನೆಲೆಯಲ್ಲಿ ತಾಲೂಕಾಡಳಿತ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.