ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

ಕೋಲಾರ: ಸೌದಿ ಅರೇಬಿಯಾದಲ್ಲಿ ನಡೆದ ಸ್ನೂಕರ್‌ ವಿಶ್ವಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಕೋಲಾರದ ಕೆಜಿಎಫ್‌ ಯುವತಿ ಕೀರ್ತನಾ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್‌ ಟೂರ್ನಿಯಲ್ಲಿ ಕಂಚು, ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಹೌದು. ಕೋಲಾರದ ಜಿಲ್ಲೆಯ ಯುವಸಮೂಹಕ್ಕೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಛಲವಿದೆ ಬಿಡದೇ ಸಾಧಿಸುವ ಮನಸ್ಸಿದೆ ಅನ್ನೋದಕ್ಕೆ ಕೀರ್ತನಾ ಉದಾಹರಣೆಯಾಗಿದ್ದಾರೆ. ಅಂಡರ್ 16 ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21 ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಕೀರ್ತಿನಾ ಸದ್ದಿಲ್ಲದೇ ಸ್ನೂಕರ್‌ ಕ್ರೀಡೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದ್ದಾಳೆ.

ಈಕೆಯ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಕ್ಲಬ್‌ನಲ್ಲಿ ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತನ್ನ ತಂದೆಯಿಂದಲೇ ಪ್ರೇರಣೆ ಪಡೆದ ಕೀರ್ತನಾ ಸ್ನೂಕರ್‌ನ ಕ್ಯೂ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. 13ನೇ ವಯಸ್ಸಿಗೆ ಬಾಲ್‌ ಹೊಡೆಯಲಾರಂಭಿಸಿದ ಹುಡುಗಿ ಈಗ ಚಿನ್ನಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರರೆ.

2017ರಲ್ಲಿ ಚೀನಾದಲ್ಲಿ ನಡೆದ ಅಂಡರ್‌ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022 ರಲ್ಲಿ ರೋಮಾನಿಯಾದಲ್ಲಿ ಕಂಚು ಗೆದ್ದು, ಇದೀಗ ಅಂಡರ್‌ 21 ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್‌ಗಳಲ್ಲಿ ಭಾಗವಹಿಸಬೇಕು, ಇನ್ನಷ್ಟು ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಗುರಿಯಾಗಿದೆ.