ಅಂಕೋಲಾ: ತಾಲ್ಲೂಕಿನಲ್ಲಿ ಮುಂದುವರೆದ ವರುಣಾರ್ಭಟ: ಉಕ್ಕಿ ಹರಿಯುತ್ತಿರುವ ಗಂಗಾವಳಿ

ಅಂಕೋಲಾ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಗಾಳಿ ಮಳೆಯಾಗುತ್ತಿದೆ. ಬಿರುಗಾಳಿಯ ಅಬ್ಬರ ಜೋರಾಗಿದೆ.ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶ ಜಲಾವೃತವಾಗಿದೆ. ಯಲ್ಲಾಪುರ, ಕಲಘಗಟಗಿ ಮತ್ತು ಘಟ್ಟದ ಮೇಲಿನ ಪ್ರದೇಶದಲ್ಲಿ ಬಿರುಸಿನ ಮಳೆ ಆಗುತ್ತಿರುವ ಕಾರಣ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ.

2019ರಿಂದ ತಾಲ್ಲೂಕು ಸತತ ಭೀಕರ ನೆರೆಗೆ ತುತ್ತಾಗುತ್ತಿದೆ. 2021ರ ಜುಲೈ 21ರಂದು ಹಿಂದೆಂದೂ ಕಾಣದ ಪ್ರವಾಹಕ್ಕೆ ತಾಲ್ಲೂಕಿನ ಜನರು ತತ್ತರಿಸಿ ಹೋಗಿದ್ದರು. ಅಪಾರ ಪ್ರಮಾಣದ ಹಾನಿ ಉಂಟುಮಾಡಿತ್ತು. ಮೂವರು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದರು. ಒಂದೇ ದಿನ 14 ಕ್ಕೂ ಅಧಿಕ ಜಾನುವಾರಗಳು ಪ್ರವಾಹದ ಸೆಳೆತಕ್ಕೆ ಕೊಚ್ಚಿ ಹೋಗಿದ್ದವು. 11 ಗ್ರಾಮ ಪಂಚಾಯಿತಿಗಳ ನೂರಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿದ್ದವು. 2022 ರಲ್ಲಿ ಬಿಡುವು ನೀಡಿದ್ದ ಪ್ರವಾಹ ಈಗ ತನ್ನ ಭೀಕರತೆಯ ಅನಾವರಣಕ್ಕೆ ಸಜ್ಜಾದಂತಿದೆ.


ತಾಲ್ಲೂಕಿನ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಗಾಳಿಯ ಅಬ್ಬರ ಜೋರಾಗಿರುವ ಪರಿಣಾಮ ಹಲವೆಡೆ ಮರಗಳು ಧರೆಗುರುಳುತ್ತಿವೆ. ನದಿ ತೀರದ ಅಡಿಕೆ ಬಾಳೆ ಮತ್ತು ತೆಂಗಿನ ಮರಗಳು ಹೆಚ್ಚಾಗಿ ಹಾನಿಗೊಳಗಾಗಿವೆ.
ಶನಿವಾರ ಮಧ್ಯಾಹ್ನ ಜಾಸ್ತಿ ಆಗಿದ್ದ ಗಂಗಾವಳಿ ನದಿಯ ನೀರಿನ ಮಟ್ಟದಲ್ಲಿ ರಾತ್ರಿ ಸ್ವಲ್ಪ ಕಡಿಮಯಾಗಿತ್ತಾದರೂ ರವಿವಾರ ಮಧ್ಯಾಹ್ನ ಮತ್ತೆ ಏರಿಕೆಯಾಗಿದೆ. ಘಟ್ಟದ ಮೇಲಿನ ನೀರು ಹರಿದು ಬರುತ್ತಿದ್ದು ಅಪಾರ ಪ್ರಮಾಣದ ಕಟ್ಟಿಗೆ ನದಿಯಲ್ಲಿ ತೇಲಿಕೊಂಡು ಬರುತ್ತಿದ್ದೆ. ಯಲ್ಲಾಪುರ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಅಂಕೋಲಾ ತಾಲ್ಲೂಕಿನ ಕರಾವಳಿ ತೀರದ ಜನರು ಆತಂಕದಲ್ಲಿದ್ದಾರೆ.