ತಿಂದ ಮನೆಗೆ ಕನ್ನ ಹಾಕಿದ್ದ ಖದೀಮರು ಕೊನೆಗೂ ಅಂದರ್: ಶ್ರೀಮಂತರಾಗಲು ಹೀಗಾ ಮಾಡೋದು

ಬೆಂಗಳೂರು ಗ್ರಾಮಾಂತರ, ಜು.23: ಮಾಲೀಕನನ್ನೇ ಯಾಮಾರಿಸಿ ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾನಗರದಲ್ಲಿರುವ ಆತನ ಮನೆಯಿಂದ 25 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೋಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದವರಾದ ಮಹೇಂದ್ರ ಸಿಂಗ್, ಜಗಮಲ್ ಸಿಂಗ್ ಬಂಧಿತ ಆರೋಪಿಗಳು. ಇವರು ಗುಟ್ಕಾ ವ್ಯಾಪಾರಿಯಾಗಿದ್ದ ಸರ್ವಣ್ ಭಾರತಿ ಎಂಬುವವರ ಬಳಿ ಕೆಲಸ ಮಾಡುತ್ತಿದ್ದು, ಅವರ ಮನೆಯ ಬಾಗಿಲನ್ನೇ ಮುರಿದು 25 ಲಕ್ಷ ಹಣವನ್ನ ಕದ್ದು ಎಸ್ಕೇಪ್ ಆಗಿದ್ದರು.

ಚೆನೈನಲ್ಲಿದ್ದ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್

ಹೌದು ಗುಟ್ಕಾ ಮಾರಾಟ ಮಾಲೀಕ ಸರ್ವಣ್​​ಗೆ ಹಣ ಬಂದಿರುವುದನ್ನ ತಿಳಿದಿದ್ದ ಮಹೇಂದ್ರ ಸಿಂಗ್, ಚೆನೈನಲ್ಲಿದ್ದ ತನ್ನ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್ ಹಾಕಿ, ಬರೊಬ್ಬರಿ 25 ಲಕ್ಷ ಹಣ ಕಳ್ಳತನ ಮಾಡಿದ್ದರು. ಬಳಿಕ ಜಗಮಲ್ ಸಿಂಗ್ ಆ ಹಣವನ್ನ ತೆಗೆದುಕೊಂಡು ಹೋಗಿದ್ದ. ಅದರಂತೆಯೇ ಜು.19 ನೇ ತಾರೀಖಿನಂದು ಲೋಡ್ ಇಳಿಸಿ ಬರಲು ಹೋಗಿದ್ದ ಸರ್ವಣ್​ಗೆ ಕಳ್ಳತನವಾಗಿರುವುದ ಬೆಳಕಿಗೆ ಬಂದಿದೆ. ಕೂಡಲೇ ಮನೆಯಲ್ಲಿದ್ದ ಹಣ ಕಳ್ಳತನವಾಗಿರುವ ಬಗ್ಗೆ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಬಳಿಕ ಸರ್ವಣ್ ಬಳಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್​ನನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಹೆಬ್ಬಗೋಡಿ ಪೋಲೀಸರು ಯಶಸ್ಸಿಯಾಗಿದ್ದಾರೆ.

ಘಟನೆ ಕುರಿತು ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ‘ ಹೆಬ್ಬುಗೋಡಿ ಯಾರಂಡಹಳ್ಳಿ ಗುಟುಕ ದಾಸ್ತಾನಿನ ಮಾಲೀಕನ ಮನೆಯಲ್ಲಿ ವ್ಯವಹಾರದಿಂದ ಬಂದ ಕಲೆಕ್ಷನ್ ದುಡ್ಡು ಕಳ್ಳತನವಾಗಿತ್ತು. ಅದೇ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಮಹೇಂದ್ರ ಸಿಂಗ್ ಎಂಬಾತನ ಮೇಲೆ ಅನುಮಾನ ಮೂಡಿತ್ತು. ಬಳಿಕ ರಾಜಸ್ಥಾನ ಮೂಲದ ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ಈ ವೇಳೆ ಆತ ನಡೆಸಿದ ಕೃತ್ಯ ಬಯಲಿಗೆ ಬಂದಿದೆ. ಚೆನ್ನೈನಲ್ಲಿರುವ ತನ್ನ ಸಂಬಂಧಿ ಜಗಮಲ್ ಸಿಂಗ ಜೊತೆಗೂಡಿ ಕಳ್ಳತನ ಮಾಡಲಾಗಿದೆ. ಇದೀಗ ಬಂಧಿತರಿಂದ 19 ಲಕ್ಷ ಹಣ ರಿಕವರಿ ಮಾಡಲಾಗಿದೆ. ಮಾಡಿದ ಸಾಲ ಹಾಗೂ ಹಾಗೂ ಧಿಡೀರ್ ಶ್ರೀಮಂತಿಕೆಯ ಆಸೆಯಿಂದ ಕೃತ್ಯ ಎಸಗಿದ್ದಾರೆ ಎಂದರು.