ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

ಢಾಕಾ: ಇತ್ತೀಚೆಗೆ ಕ್ರಿಕೆಟ್‌ನಲ್ಲಿ ವಿವಾದಗಳು ಸಾಮಾನ್ಯವಾಗಿಬಿಟ್ಟಿದ್ದು, ಅಂಪೈರ್‌ಗಳು ನೀಡುವ ತೀರ್ಪುಗಳೇ ಇದಕ್ಕೆ ಕಾರಣವಾಗುತ್ತಿವೆ. ವಿವಾದಿತ ತೀರ್ಪಿಗಳಿಂದಾಗಿ ಆಟಗಾರರ ನಡುವೆ ವಿವಾದ ಸೃಷ್ಟಿಯಾಗುತ್ತಿವೆ.‌ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ವಿವಾದ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಬಾಂಗ್ಲಾದೇಶ ಪ್ರವಾಸದಲ್ಲಿ ಆತಿಥೇಯರ ಎದುರು ಏಕದಿನ ಕ್ರಿಕೆಟ್‌ ಸರಣಿ ಗೆಲುವಿಗೆ ಅಡ್ಡಗಾಲಾದ ಅಂಪೈರ್‌ಗಳ ವಿರುದ್ಧ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹರಿಹಾಯ್ದಿದ್ದಾರೆ. ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಗೊಂಡಿತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಆದ್ರೆ ಅಂಪೈರ್‌ ತೀರ್ಪಿನಿಂದ ಗೆಲುವು ಲಭ್ಯವಾಗದೇಹೋದ ಬಗ್ಗೆ ಹರ್ಮನ್‌ಪ್ರೀತ್‌ ಕೌರ್‌ ಆಕ್ರೋಶ ಹೊರಹಾಕಿದ್ದಾರೆ. ಗುಡುಗಿದ್ದಾರೆ. ಇನ್ನು 3 ಪಂದ್ಯಗಳ ಒಡಿಐ ಸರಣಿ 1-1 ಅಂತರದಲ್ಲಿ ಸಮಬಲದೊಂದಿಗೆ ಅಂತ್ಯಗೊಂಡಿತು.

ಒತ್ತಡದ ಪಂದ್ಯದಲ್ಲಿ ಗೆಲುವಿಗೆ 226 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅನುಭವಿ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ (59 ರನ್‌,85 ಎಸೆತ) ಜವಾಬ್ದಾರಿಯುತ ಆಟವಾಡಿ 3ನೇ ವಿಕೆಟ್‌ಗೆ ಹರ್ಲೀನ್‌ ಡಿಯೋಲ್‌ (77 ರನ್,85 ಎಸೆತ) ಜೊತೆಗೂಡಿ 107 ರನ್‌ ಒಗ್ಗೂಡಿಸಿದರು. ಈ ಜೊತೆಯಾಟದೊಂದಿಗೆ ಭಾರತ ತಂಡ ಸುಲಭವಾಗಿ ಜಯದ ಕಡೆಗೆ ದಾಪುಗಾಲಿಟ್ಟಿತ್ತು. ಮಂಧಾನಾ ವಿಕೆಟ್‌ ಪತನವಾದಾಗ ಭಾರತ ತಂಡಕ್ಕೆ ಇನ್ನು 87 ರನ್‌ಗಳ ಅಗತ್ಯವಿತ್ತು.

ಬಾಂಗ್ಲಾ ಕಳಪೆ ಅಂಪೈರಿಂಗ್‌:
5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, 21 ಎಸೆತಗಳಲ್ಲಿ 2 ಫೋರ್‌ಗಳೊಂದಿಗೆ 14 ರನ್‌ ಗಳಿಸಿ ಎಚ್ಚರಿಕೆಯಿಂದ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಅಂಪೈರ್‌ ನೀಡಿದ ಕಳಪೆ ಎಲ್‌ಬಿಡಬ್ಲ್ಯು ನಿರ್ಧಾರ ಕಾರಣ ಪೆವಿಲಿಯನ್ ಸೇರುವಂತ್ತಾಯಿತು.

ಅಂಪೈರ್‌ಗಳ ಎಡವಟ್ಟು – ಹರ್ಮನ್‌ ಸಿಟ್ಟು:
ಇನಿಂಗ್ಸ್‌ನ 34ನೇ ಓವರ್‌ನಲ್ಲಿ ಸ್ಪಿನ್ನರ್ ನಹೀದಾ ಅಖ್ತರ್‌ ಎದುರು ಸ್ವೀಪ್ ಶಾಟ್‌ಗೆ ಪ್ರಯತ್ನಿಸಿದಾಗ ಬಾಲ್‌ ಪ್ಯಾಡ್‌ಗೆ ಬಡಿಯಿತು. ಹಾಗಾಗಿ ಆನ್‌ಫೀಲ್ಡ್‌ ಅಂಪೈರ್‌ ಎಲ್‌ಬಿಡಬ್ಲ್ಯೂ ಅಂತಾ ಔಟ್‌ ತೀರ್ಪು ನೀಡಿದರು. ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ತೋರಿಸಿದ ಹರ್ಮನ್‌ಪ್ರೀತ್‌ ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಹೊಡೆದು ಅಸಮಾಧಾನ ಹೊರಹಾಕಿದ್ದರು. ಅಂದಹಾಗೆ ಚೆಂಡು ಬ್ಯಾಟ್‌ಗೆ ತಾಗಿದ್ದರೆ ಸ್ಲಿಪ್‌ ಫೀಲ್ಡರ್‌ ಕ್ಯಾಚ್‌ ತೆಗೆದುಕೊಂಡಿದ್ದ ಕಾರಣ ಆಗಲೂ ಹರ್ಮನ್‌ ಔಟ್‌ ಆಗುತ್ತಿದ್ದರು. ಆದ್ರೆ ಅಂಪೈರ್‌ ಅದನ್ನ ಎಲ್‌ಬಿಡಬ್ಲ್ಯು ಎಂದು ಘೋಷಿಸಿದ್ದು 34 ವರ್ಷದ ಬಲಗೈ ಬ್ಯಾಟರ್‌ ಹರ್ಮನ್ ಕೋಪಕ್ಕೆ ಕಾರಣವಾಯಿತು.

ಹರ್ಮನ್‌ಪ್ರೀತ್‌ ಕೌರ್ ವಿಕೆಟ್‌ ಪತನದ ಬಳಿಕ ಭಾರತ ತಂಡ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿರಾ ರೊಡ್ರಿಗಸ್‌ 45 ಎಸೆತಗಳಲ್ಲಿ 33* ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರೂ, ಅವರಿಗೆ ಉತ್ತಮ ಸಾಥ್‌ ಸಿಗಲಿಲ್ಲ. ಕೊನೇ ಬ್ಯಾಟರ್‌ ಮೇಘನಾ ಸಿಂಗ್‌ (6) ಜೊತೆಗೂಡಿದ್ದ ಜೆಮಿಮಾ ಭಾರತಕ್ಕೆ ಇನ್ನೇನು ಜಯ ತಂದೇಬಿಟ್ಟರು ಎಂಬಂತ್ತಿತ್ತು. ಆದರೆ, ಚೆಂಡು ಮೇಘನಾ ಬ್ಯಾಟ್‌ಗೆ ತಾಗದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ಕಾಟ್‌ ಬಿಹೈಂಡ್‌ ಔಟ್‌ ತೀರ್ಪು ನೀಡಿದ್ದರು. ಇದು ಭಾರತ ತಂಡದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌ ಅವರ ಕೋಪವನ್ನು ದುಪ್ಪಟ್ಟಾಗಿಸಿ, ಪಂದ್ಯದ ಬಳಿಕ ನಡೆದ ಗೋಷ್ಠಿಯಲ್ಲಿ ಸ್ಪೋಟಗೊಂಡಿತು.

ಆಟದಲ್ಲಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಕ್ರಿಕೆಟ್‌ಗಿಂತಲೂ ಇಲ್ಲಿ ನಡೆದ ಅಂಪೈರಿಂಗ್ ಕಂಡು ನಮಗೆ ಆಶ್ಚರ್ಯವಾಗಿದೆ. ಮುಂದಿನ ಬಾರಿ ನಾವು ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಮೊದಲೇ ಈ ರೀತಿಯ ಕಳಪೆ ಅಂಪೈರಿಂಗ್ ವಿರುದ್ಧವೂ ಆಡಬೇಕಾಗುತ್ತದೆ ಎಂದು ತಯಾರಿ ನಡೆಸಿ ಬರುತ್ತೇವೆ ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಹರ್ಮನ್‌ ಸಿಟ್ಟು ಹೊರಹಾಕಿದರು. ಈ ನಡುವೆ ಹರ್ಮನ್‌ ಪ್ರೀತ್‌ ಪರ ಸ್ಮೃತಿ ಮಂಧಾನ ಸಹ ಬ್ಯಾಟ್‌ ಬ್ಯಾಟಿಂಗ್‌ ಮಾಡಿದರು.

ಕೌರ್‌ ವಿರುದ್ಧ ಬಾಂಗ್ಲಾ ಕ್ರಿಕೆಟಿಗರು ಕಿಡಿ:
ಮ್ಯಾಚ್‌ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ, ಹರ್ಮನ್‌ ಪ್ರೀತ್‌ಕೌರ್‌ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದು ಸಂಪೂರ್ಣವಾಗಿ ಅವರದ್ದೇ ಸಮಸ್ಯೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹರ್ಮನ್‌ ಓರ್ವ ಆಟಗಾರ್ತಿಯಾಗಿ ಉತ್ತಮ ನಡವಳಿಕೆ ತೋರಿಸಬೇಹುದಿತ್ತು. ಆದ್ರೆ ಅವರ ವರ್ತನೆ ನನಗೆ ಸರಿ ಎನ್ನಿಸಲಿಲ್ಲ ಎಂದು ಹೇಳಿದರಲ್ಲದೇ, ನಾವು ಪುರುಷರ ಕ್ರಿಕೆಟ್‌ ಟೀಂನ ಉತ್ತಮ ಅಂಪೈರ್‌ಗಳನ್ನೇ ಆಯ್ಕೆ ಮಾಡಿದ್ದೆವು. ಅವರ ನಿರ್ಧಾರವನ್ನ ನಾವು ಗೌರವಿಸುತ್ತೇವೆ ಎಂದಿದ್ದಾರೆ.