ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಬಳಿ ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹ ಶ್ರೀರಾಮ ವಿಗ್ರಹ ಸ್ಥಾಪನೆಗೆ ಇಂದು (ಭಾನುವಾರ) ಶಂಕುಸ್ಥಾಪನೆ ನೆರವೇರಲಿದೆ. ಮಂತ್ರಾಲಯದ ಹೊರವಲಯದಲ್ಲಿ ಪ್ರತಿಷ್ಠಾಪನೆಯಾಗಲಿರುವ 108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್‌ಗೆ ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚೂವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಭೂಮಿ ಪೂಜೆ ನಡೆಯಲಿದೆ. ಹೈದರಾಬಾದ್ ಮೂಲದ ಜೈ ಶ್ರೀರಾಮ್ ಫೌಂಡೇಶನ್ 300 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದೆ. ಈ ಮೂಲಕ ಮಂತ್ರಾಲಯ – ಬೆಂಗಳೂರು ಮಾರ್ಗದಲ್ಲಿ ದೇವಾಲಯ ಹಾಗೂ ಪ್ರವಾಸಿ ತಾಣ ತಲೆ ಎತ್ತಲಿದೆ.
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಜಾಗದಲ್ಲಿ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ಪ್ರತಿಮೆ ಬಳಿ ಶ್ರೀರಾಮ ದೇವಾಲಯ ಹಾಗೂ ಥೀಮ್ ಪಾರ್ಕ್‌ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಪ್ರತಿರೂಪದ ದೇವಾಲಯಗಳ ನಿರ್ಮಾಣ ನಡೆಯಲಿದೆ. ಗುಜರಾತ್‌ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ದೆಹಲಿಯಲ್ಲಿ ಪ್ರತಿಮೆ ತಯಾರಿಕೆ ಕಾರ್ಯ ಆರಂಭವಾಗಿದ್ದು, ಮುಂದಿನ ವರ್ಷ ಅಂತ್ಯಕ್ಕೆ ಪ್ರತಿಮೆ ಪ್ರತಿಷ್ಠಾಪನೆ ಸಾಧ್ಯತೆಯಿದೆ.