ಪೊಲೀಸ್ ಅಧಿಕಾರಿಯೊಬ್ಬರು ರಸ್ತೆ ಮಧ್ಯದಲ್ಲಿ ಮಲಗುವ ಮೂಲಕ ಸಹೋದ್ಯೋಗಿಗಳ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಿರುವ ಘಟನೆ ಪಂಜಾಬ್ನ ಜಲಂಧರದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯ ಮಧ್ಯದಲ್ಲಿ ಮಲಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದರಿಂದಾಗಿ ಪಠಾಣ್ಕೋಟ್ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನೆಯ ವೀಡಿಯೋ ಇದೀಗ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ತನ್ನ ಸಹೋದ್ಯೋಗಿಗಳ ವಿರುದ್ಧ ದನಿ ಎತ್ತಿದ್ದಾರೆ. ನಾನು ಕಳ್ಳನನ್ನು ಹಿಡಿಯುತ್ತೇನೆ, ಬಳಿಕ ಠಾಣೆಯಲ್ಲಿ ಹಣವನ್ನು ತೆಗೆದುಕೊಂಡು ಅವರನ್ನು ಬಿಟ್ಟುಕಳುಹಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಇತರೆ ಪೊಲೀಸ್ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದು, ಠಾಣೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.
ಭೋಗ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಖ್‌ಜಿತ್ ಸಿಂಗ್ ಮಾತನಾಡಿ, ಕೆಲವು ದಿನಗಳ ಹಿಂದೆ ಗೃಹ ರಕ್ಷಕ ದಳದ ಪೊಲೀಸರು ಯಾವುದೋ ಕಲಹಕ್ಕೆ ಸಂಬಂಧಿಸಿದಂತೆ ಯುವಕನನ್ನು ಠಾಣೆಗೆ ಕರೆತಂದಿದ್ದರು. ಆದರೆ ಆ ಪ್ರಕರಣದಲ್ಲಿ, ಆರೋಪಿಯು ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿ ಜಾಮೀನು ಪಡೆದು ನಂತರ ಬಿಡುಗಡೆಗೊಂಡಿದ್ದಾನೆ ಎಂದು ಹೇಳಿದರು.