ಬೆಂಗಳೂರು: ಕರ್ನಾಟಕ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಉದ್ಯಾನವನ ನಗರದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ ಇದರ ತದ್ವಿರುದ್ಧವಾಗಿದ್ದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಹೌದು ಮೇ ತಿಂಗಳಲ್ಲಿ ಸರಾಸರಿ 5.6 ಲಕ್ಷ ಪ್ರಯಾಣಿಕರು ಪ್ರತಿದಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಜಾರಿ ನಂತರ ಪ್ರಯಾಣಿಕರ ಸಂಖ್ಯೆ ದಿನಕ್ಕೆ 6.1 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೇ ಪ್ರಯಾಣಿಕರ ಸಂಖ್ಯೆ 40,000ಕ್ಕೆ ಏರಿಕೆಯಾಗಿದೆ.
ಜುಲೈನಲ್ಲಿ (ಶುಕ್ರವಾರದವರೆಗೆ) ದೈನಂದಿನ ಪ್ರಯಾಣಿಕರ ಸಂಖ್ಯೆ 6.1 ಲಕ್ಷ ಗಡಿ ದಾಟಿದೆ. ಇದರ ಹಿಂದಿನವಾರ ಜುಲೈ 15 ರಂದು 6.7 ಲಕ್ಷ ಜನರು ಪ್ರಯಾಣಿಸುವ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಮಾತನಾಡಿ ಜನರನ್ನು ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಉತ್ತೇಜಿಸುವ ಮೂಲಕ ಶಕ್ತಿ ಯೋಜನೆಯು ತನ್ನ ಉದ್ದೇಶವನ್ನು ಸಾಧಿಸುತ್ತಿದೆ. ನಮ್ಮ ಮೆಟ್ರೋ ಯೋಜನೆಯಿಂದ ಋಣಾತ್ಮಕ ಪರಿಣಾಮ ಬೀರಿಲ್ಲ, ಬದಲಿಗೆ ಇದು ನಮ್ಮ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. ಕೆಲಸದ ದಿನಗಳಲ್ಲಿ 6.2 ರಿಂದ 6.3 ಲಕ್ಷ ಜನರು ಪ್ರಯಾಣಿಸಿದ್ದಾರೆ. ಕೆಲವು ದಿನಗಳಲ್ಲಿ ಅದು 6.6 ಲಕ್ಷದ ಗಡಿ ದಾಟಿದೆ. ಇದರಿಂದ ದಿನಕ್ಕೆ 15 ಲಕ್ಷ ಆದಾಯವಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದ ಬಿಎಂಟಿಸಿ ಬಸ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡಲು ಆರಂಭಿಸಿದರು. ಇದರಿಂದ ಬಸ್ಗಳು ರಶ್ ಆದವು. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯಮಿ ಹಾಗೂ ಪುರುಷರು ಕಿಕ್ಕಿರಿದು ತುಂಬಿದ್ದ ಬಸ್ಗಳಲ್ಲಿ ಪ್ರಯಾಣಿಸಲು ಇಚ್ಚಿಸದೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದೆ. ನಗರದಲ್ಲಿ, ನಮ್ಮ ಮೆಟ್ರೋ 70 ಕಿಮೀ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.