ಜೋಯಿಡಾ ತಾಲ್ಲೂಕಿನ ಕುಂಡಲ್‌ನಲ್ಲಿ ಮುಳುಗಿದ ಸೇತುವೆ – ನಡುಗಡ್ಡೆಯಾದ ಸುತ್ತಮುತ್ತಲ ಗ್ರಾಮಗಳು

ಜೊಯಿಡಾ : ತಾಲೂಕಿನ ಕಾತೇಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರಿಗೆ ನಿರ್ಮಾಣ ಮಾಡಲಾದ ಕುಂಡಲ್ ಸೇತುವೆ ಕಳೆದ ಎರಡು ದಿನಗಳಿಂದ ಮುಳುಗಿದ್ದು, ಸಂಚಾರ ಸ್ಥಗಿತಗೊಂಡು ಗ್ರಾಮ ನಡುಗಡ್ಡೆಯಾಗಿದೆ. ಪರಿಣಾಮವಾಗಿ ಅನಾರೋಗ್ಯಗೊಂಡು ಒದ್ದಾಡುತ್ತಿದ್ದ ರಾಜಾ ವೆಳಿಪ್ ಹಾಗೂ ಗಣೇಶ ವೆಳಿಪ ಅವರಿಬ್ಬರನ್ನು ಇಂದು ಶನಿವಾರ ಸಂಜೆ ಗಣೇಶಗುಡಿಯ ಹಾರ್ನ್ ಬಿಲ್  ಅಡ್ವೆಂಚರ್ಸ್ ಝೋನ್ ಇವರ ರಾಪ್ಟ್ ಹಾಗೂ ನುರಿತ ಇಬ್ಬರು ಸಿಬ್ಬಂದಿಗಳ  ಮೂಲಕ ಗ್ರಾಮದಿಂದ ಹೊರ ತಂದು ಜೋಯಿಡಾ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇತುವೆ ಮುಳುಗಿದ ಹಿನ್ನೆಲೆಯಲ್ಲಿ ನಡುಗಡ್ಡೆಯಾಗಿರುವ ಕುಂಡಲ್  ಸೇರಿದಂತೆ ಇನ್ನಿತರ ಗ್ರಾಮಗಳು ಇದೀಗ ಸ್ಥಬ್ದಗೊಂಡಿದೆ.  ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಈ ಭಾಗದ ಗ್ರಾಮಗಳಾದ ಕುಂಡಲ್ ಹಾಗೂ ಸುತ್ತಮುತ್ತಲಿನ ಕುರಾವಲಿ, ನವರ, ಆಂಬಾಳ ಗ್ರಾಮಗಳಲ್ಲಿ 1000 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶುಕ್ರವಾರ ಸೇತುವೆ ಮುಳುಗಿದ್ದರಿಂದ ಒಂದು ದಿನ ಸ್ಥಳಿಯರು ದಶಕಗಳ ಹಿಂದಿನ ಹಳೆ ದೋಣಿಯಲ್ಲಿ ಸಂಚಾರ ಮಾಡಿದ್ದರು. 

ಅಪಾಯದ ಮುನ್ಸೂಚನೆ ಇರುವುದರಿಂದ ಹೊಸ ದೋಣಿ ಕಲ್ಪಿಸುವುದು ಅಗತ್ಯ ಎಂದು ತಾಲೂಕಾಡಳಿತಕ್ಕೆ ಬೇಡಿಕೆ ಇಟ್ಟಿದ್ದರು. ಹೊಸ ದೋಣಿ ನೀಡುವುದು ಒಂದೆರಡು ದಿನದ ಕೆಲಸವಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಾಡಳಿತ ಗಣೇಶಗುಡಿಯ ರಾಪ್ಟಿಂಗ್ ದೋಣಿ ಸಮೇತ ಇಬ್ಬರು ನುರಿತ ಚಾಲಕರನ್ನು ನಿಯೋಜಿಸಿ  ಗ್ರಾಮಸ್ಥರಲ್ಲಿ ಧೈರ್ಯವನ್ನು ತುಂಬುವ ಕಾರ್ಯ ಮಾಡಿದೆ. 

ಸ್ಥಳಕ್ಕೆ ಜೊಯಿಡಾ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಮಾರ್ಗದರ್ಶನದಲ್ಲಿ ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿ, ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಆಕಾಶ ಅನಸ್ಕರ, ಗ್ರಾಮಲೆಕ್ಕಿಗ ಸೈಪಾನ ಸಾಬ್, ಗ್ರಾಮ ಪಂಚಾಯತ್ ಸಿಬ್ಬಂದಿ ಶಿವಾನಂದ ದೇಸಾಯಿ, ರಾಜು ದೇಸಾಯಿಯವರ ತಂಡ ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದೆ.

ಇನ್ನೂ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಅವರು ಜೋಯಿಡಾ ತಾಲೂಕಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.