ಜೊಯಿಡಾ: ಸಂಸ್ಕಾರ, ಸಂಸ್ಕೃತಿ, ಕಲೆ, ಶಾಂತಿ ಸೌಹಾರ್ದತೆಯ ನಾಡು ಕನ್ನಡ. ಕನ್ನಡ ಭಾಷೆಯೆ ಚೆಂದ, ಕನ್ನಡದ ನೆಲವೆ ಅಂದ. ನಮ್ಮ ಮಾತೃಭಾಷೆಯಾದ ಕನ್ನಡ ಬೆಳೆದರೆ ನಾವು ಬೆಳೆಯುತ್ತೇವೆ ಎಂದು ಜೋಯಿಡಾದ ಸಿಪಿಐ ನಿತ್ಯಾನಂದ ಪಂಡಿತ್ ಅವರು ಅಭಿಪ್ರಯಿಸಿದರು.
ಅವರು ಇಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜೋಯಿಡಾ ತಾಲ್ಲೂಕಿನ ರಾಮನಗರದಲ್ಲಿ ಕಸಾಪ ಜಿಲ್ಲಾ ಘಟಕ ಮತ್ತು ಜೋಯಿಡಾ ತಾಲ್ಲೂಕು ಘಟಕದ ಆಶ್ರಯದಡಿ ಜೋಯಿಡಾ ತಾಲ್ಲೂಕಿನ ರಾಮನಗರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕಸಾಪ ಹಮ್ಮಿಕೊಂಡ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೊಯಿಡಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ ಅವರು ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಕನ್ನಡ ಮಾತೆಯ ಆಶೀರ್ವಾದ ಭರಿತ ಅಭಿನಂದನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರು ಗಡಿ ಭಾಗದಲ್ಲಿ ಮಕ್ಕಳಿಗೆ ಕನ್ನಡ ಪ್ರೀತಿ ಹಾಗೂ ಶಾಲೆಯಲ್ಲಿ ಕನ್ನಡದ ಏಳಿಗೆಗಾಗಿ ಈ ಪ್ರೋತ್ಸಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಳ್ಳೆಯವರ ಸಂಘ ಮಾಡಿ, ನಾಡಿನ ಭಾಷೆ, ಸಂಸ್ಕ್ರತಿಗೆ ಗೌರವಿಸಿ, ಬದುಕಿನಲ್ಲಿ ಸಂಸ್ಕಾರಯತವಾದ ವ್ಯಕ್ತಿಗಳಾಗಿ ಬಾಳಿ ಎಂದರು.
ಮುಖ್ಯ ಅತಿಥಿಗಳಾಗಿ ಜೊಯಿಡಾ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ಸಾಳುಂಕೆ, ವಸತಿ ಶಾಲೆ ಪ್ರಾಚಾರ್ಯ ಬಿ.ಎಮ್.ಮಲ್ಲೂರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರು , ಜೋಯಿಡಾ 2 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಂತೋನಿ ಜೋನ್ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ ಮಾತನಾಡಿದರು.
ತಾಲೂಕಿನ ಕನ್ನಡ ಮಾಧ್ಯಮದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ 18 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಭಿನಂದನೆಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ,ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜೋಯಿಡಾ ತಾಲೂಕಿನ ಘಟಕದ ಅಧ್ಯಕ್ಷ ಪಾಂಡುರಂಗ ಪಟಗಾರ ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಸುಭಾಷ್ ಗಾವಡಾ ಸ್ವಾಗತಿಸಿದರು.
ತಾಲೂಕು ಕಸಾಪದ ಕಾರ್ಯದರ್ಶಿ ಪ್ರೇಮಾನಂದ ವೇಳಿಪ ವಂದಿಸಿದರು, ಭಾಸ್ಕರ್ ಗಾಂವಕರ ನಿರೂಪಿಸಿದರು.