ನೆಲಮಂಗಲ, ಜುಲೈ 21: ಮಹಿಳೆಯೊಬ್ಬಳು ತನ್ನ ಪತಿಯನ್ನೇ ತೊರೆದು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿಕೊಂಡಿದ್ದ ಬಾಯ್ಫ್ರೆಂಡ್ ಜೊತೆ ಪರಾರಿಯಾದ ಘಟನೆ ನೆಲಮಂಗಲ ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯ ಪತಿ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಪತಿಯನ್ನು ತೊರೆದು ಮತ್ತೊಬ್ಬರ ಜೊತೆ ಓಡಿಹೋಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹದ್ದೇ ದುಸ್ಸಾಹಸ ನಡೆಸಿದ್ದಳು ಎಂದು ತಿಳಿದುಬಂದಿದೆ.
ಮಂಡ್ಯ ಮೂಲದ ಅರ್ಪಿತಾ (23) ಮತ್ತು ನೆಲಮಂಗಲ ಉತ್ತರ ತಾಲೂಕಿನ ಸೋಲದೇವನಹಳ್ಳಿ ಮನೋಹರ್ಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದೆ. ಇವರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಅರ್ಪಿತಾ ಮಾತ್ರ ತನ್ನ ಗಂಡನ ಜೊತೆ ಸರಿಯಾಗಿ ಬಾಳ್ವೆ ನಡೆಸದೆ ನಾಲ್ಕು ಬಾರಿ ಇತರರೊಂದಿಗೆ ಓಡಿಹೋಗಿ ವಾಪಸ್ ಪತಿ ಮನೆ ಸೇರಿದ್ದಳು.
ಹೀಗೆ ಇನ್ಸ್ಟಾಗ್ರಾಮ್ನಲ್ಲಿ ಕಾಲಕಳೆಯುತ್ತಿದ್ದ ಅರ್ಪಿತಾಳಿಗೆ ರೀಲ್ಸ್ ಮಾಡಿಕೊಂಡಿದ್ದ ದಿನಕರ್ ಎಂಬಾತನ ಸಂರ್ಪಕವಾಗಿದೆ. ಇವರಿಬ್ಬರ ಸ್ನೇಹ ಎರಡು ವರ್ಷಗಳ ಹಿಂದೆಯೇ ಆಗಿತ್ತು. ಹೀಗೆ ಇಬ್ಬರು ರೀಲ್ಸ್ ಮಾಡಿಕೊಂಡಿದ್ದರು. ತಾನು ಎರಡು ಮಕ್ಕಳ ತಾಯಿ, ಸಂಸಾರಸ್ಥೆ ಎಂಬುದನ್ನೂ ಲೆಕ್ಕಿಸದೆ ಅರ್ಪಿತಾ ದಿನಕರ್ನನ್ನು ಪ್ರೀತಿಸಲಾರಂಭಿಸಿದ್ದಾಳೆ.
ಅದರಂತೆ, ಜುಲೈ 18 ರಂದು ಸೋಲದೇವನಹಳ್ಳಿಯಿಂದ ಅರ್ಪಿತಾ ದಿನಕರ್ ಜೊತೆ ಪರಾರಿಯಾಗಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ಮನೋಹರ್ ಸೋಲದೇವನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ರೀಲ್ಸ್, ಪಬ್ಜಿ, ಟಿಕ್ಟಾಕ್ನಂತರ ಮೋಜಿನ ವೇದಿಕೆಗಳಲ್ಲಿ ಸಣ್ಣ ಮಕ್ಕಳು, ಯುವಕ ಯುವತಿಯರು ಮಾತ್ರವಲ್ಲದೆ ಹಿರಿಯರೂ ಕಾಲಕಳೆಯುತ್ತಿದ್ದಾರೆ. ಕೆಲವರು ಟೈಮ್ ಪಾಸ್ಗಾಗಿ ಇದನ್ನು ಬಳಕೆ ಮಾಡುತ್ತಿದ್ದರೆ, ಇನ್ನು ಕೆಲವರು ಬಳಕೆ ಮಾಡುತ್ತಲೇ ತಪ್ಪುದಾರಿ ಹಿಡಿಯುತ್ತಿದ್ದಾರೆ. ಇದರಿಂದ ಸಂಸಾರಗಳು ಒಡೆಯುತ್ತಿವೆ. ಇತ್ತೀಚೆಗೆ ಪಬ್ಜಿ ಆಡುತ್ತಿದ್ದ ಭಾರತದ ಉತ್ತರ ಪ್ರದೇಶ ರಾಜ್ಯದ ಯುವಕನೊಂದಿಗೆ ಪ್ರೇಮಾಂಕುರವಾಗಿ ಪಾಕಿಸ್ತಾನದ ಮಹಿಳೆಯೊಬ್ಬಳು ಪ್ರಿಯತಮನನ್ನು ಅರಸಿಕೊಂಡು ರಾಜ್ಯಕ್ಕೆ ಆಗಮಿಸಿದ್ದಳು.