ಶಿವಮೊಗ್ಗ (ಜು.15) : ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಸಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಕಾರಾಗೃಹದಲ್ಲಿರುವವನಿಗೆ ಬೇಕರಿ ಪದಾರ್ಥಗಳನ್ನು ನೀಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ ಯುವಕರು. ಈ ಪೈಕಿ ಒಬ್ಬ ಸಿಕ್ಕಿಬಿದ್ದಿದ್ದು ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಎರಡು ವಾರದ ಹಿಂದೆ ಸಾಗರದಲ್ಲಿ ಗಾಂಜಾದೊಂದಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಅಲ್ತಾಫ್ ಎಂಬುವನಿಗೆ ಗಾಂಜಾ ನೀಡಲು ಬಂದಿದ್ದ ಯುವಕರು. ಕೈದಿಯ ಸ್ನೇಹಿತರೇ ಆಗಿರುವ ಶಿವಮೊಗ್ಗ ಗೋಪಾಳದ ಮುಸ್ತಫಾ ಮತ್ತು ಕಾಶೀಪುರದ ದಿಲೀಪ ಕೆಲವು ಬೇಕರಿ ಪದಾರ್ಥಗಳೊಂದಿಗೆ ಜೈಲಿಗೆ ತೆರಳಿದ್ದರು.
ಅಲ್ತಾಫ್‌ಗೆ ಗಾಂಜಾ ಪೂರೈಕೆ ಮಾಡುವ ಸಲುವಾಗಿ ಬೇಕರಿ ಪದಾರ್ಥಗಳ ಪೂರೈಕೆಯ ಪೊಟ್ಟಣದಲ್ಲಿ ಗಾಂಜಾ ಸೇರಿಸಿದ್ದರು. ಜೈಲಿನ ಮುಖ್ಯ ದ್ವಾರದಲ್ಲಿ ಇವರಿಬ್ಬರ ಬಳಿಯಿದ್ದ ಚೀಲವನ್ನು ಜೈಲಿನ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಗಾಂಜಾ ಪ್ಯಾಕ್‌ಗಳು ಪತ್ತೆಯಾಗಿವೆ. ಕೂಡಲೇ ಮುಸ್ತಫಾನನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ. ಆದರೆ ಆತನ ಜತೆಗಿದ್ದ ದಿಲೀಪ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಬೆಂಗಳೂರಿನ ಸೂಪರ್ ಮಾರ್ಕೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ತಫಾ, ಗೆಳೆಯನಿಗೆ ಗಾಂಜಾ ನೀಡಲು ಪ್ರಯತ್ನಿಸಿ ತನ್ನ ಭವಿಷ್ಯಕ್ಕೂ ಕಲ್ಲು ಹಾಕಿಕೊಂಡಿದ್ದಾನೆ. ಕಾರಾಗೃಹದ ಅಧೀಕ್ಷಿಕಿ ಡಾ. ಅನಿತಾ – ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.