ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿದ ಆರೋಪಿ ನಿಶಾ ನರಸಪ್ಪ ವಿರುದ್ಧ ದಾಖಲಾದ ಮತ್ತಷ್ಟು ದೂರುಗಳು

ಬೆಂಗಳೂರು, ಜುಲೈ 15: ಮಾಸ್ಟರ್ ಆನಂದ್ ಪುತ್ರಿ ವಂಶಿಕ ಹೆಸರು ಬಳಸಿ ವಂಚನೆ ಎಸಗಿ ಬಂಧಿತಳಾಗಿರುವ ನಿಶಾ ನರಸಪ್ಪಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈಕೆ ಅರೆಸ್ಟ್ ಆಗುತ್ತಿದ್ದಂತೆ ಹಲವು ಮಂದಿ ಸದಾಶಿವನಗರ ಠಾಣೆಗೆ ಆಗಮಿಸಿ ವಂಚನೆ ದೂರು ನೀಡಲು ಆರಂಭಿಸಿದ್ದಾರೆ.

ಕಳೆದ ತಿಂಗಳು ದಾಖಲಾದ ದೂರಿನ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿ ನಿಶಾ ನರಸಪ್ಪಳ ವಿರುದ್ಧ ದೂರು ನೀಡಿದ್ದಾರೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ತಾರಾ ಎಂಬುವವರಿಗೆ 20 ಲಕ್ಷ ವಂಚನೆ ಎಸಗಿದ ಆರೋಪ ಸಂಬಂಧ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ರೀತಿ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ವಂಚನೆ ದೂರುಗಳು ದಾಖಲಾಗಿವೆ.

ಸದಾಶಿವನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ ಎಸಗುತ್ತಿದ್ದಳು. ಮೊದಲು ಲಾಭಾಂಶದ ಹಣ ಕೊಟ್ಟು ಎರಡರಷ್ಟು ಹಣ ಪಡೆದು ವಂಚನೆ ಮಾಡುತ್ತಿದ್ದಳು.

ಬೆಂಗಳೂರು ದೊಡ್ಡ ಮಾಲ್​ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ರಾಮನಗರ ಮೂಲದ ನಿಶಾ, ಬೆಂಗಳೂರು ಹೊರಹೊಲಯದಲ್ಲಿನ ರೆಸಾರ್ಟ್​ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ಹಣ ವಂಚನೆ ಎಸಗಿದ್ದು, ಸದ್ಯ ಸದಾಶಿವನಗರ ಠಾಣೆಗೆ ಹಲವಾರು ದೂರುಗಳು ಬರುತ್ತಿವೆ. ಹೀಗಾಗಿ ದೂರುಗಳನ್ನ ತಮ್ಮ ಮನೆ ವ್ಯಾಪ್ತಿಯ ಠಾಣೆಗೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.