ಇಂಫಾಲ್: ಮಣಿಪುರದಲ್ಲಿ ಎರಡು ಸಮುದಾಯದ ನಡುವೆ ನಡೆದ ಘರ್ಷಣೆಯಿಂದ ಹಿಂಸಾಚಾರ ಉಂಟಾಗಿದೆ. ಅನೇಕ ಕಡೆ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇನ್ನೂ ಈ ಹಿಂಸಾಚಾರದಿಂದ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಅನೇಕರು ಮಣಿಪುರದಿಂದ ವಲಸೆ ಹೋಗಿದ್ದಾರೆ. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಮಧ್ಯೆ ಇಡಿ ಮನುಕುಲವೆ ನಾಚಿಕೆಪಡುವ ಕೃತ್ಯವೊಂದು ನಡೆದಿದೆ. ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ರಾಜ್ಯದಲ್ಲಿ ನಡೆದ ಎಲ್ಲ ಘಟನೆಗೆ ಮುಖ್ಯಮಂತ್ರಿ ಎನ್ ಬಿರೆನ್ ಹೊಣೆ ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ದೋಷಿಸಿದೆ. ಹಾಗಾಗಿ ಅವರು ಈ ಬಗ್ಗೆ ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಅಭಿಯಾನವನ್ನು ಕೂಡ ಆರಂಭಿಸಿದ್ದಾರೆ.
ಇದು ಆಡಳಿತ ವೈಫಲ್ಯವಲ್ಲ, ರಾಜೀನಾಮೆ ನೀಡುವ ಚರ್ಚೆ ಇಲ್ಲ, ಬದಲಾಗಿ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಬೇಕಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಮಣಿಪುರದಲ್ಲಿ ಎಲ್ಲ ಸರಿ ಇದೆ. ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗೃಹ ಸಚಿವರು ಕೂಡ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಕುಕಿ ಸಮುದಾಯದ ನಾಯಕರ ಜತೆಗೆ ಮಾತನಾಡಿದ್ದು, ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದ್ದು ಎಲ್ಲ ರೀತಿ ಮಾಹಿತಿಯನ್ನು ಪಡೆಯುತ್ತಿದೆ. ಮೇ 4ರಂದು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು, ಗುರುವಾರ (ಜು.21) ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿತ್ತು, 71 ದಿನಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ದೂರು ನೀಡಲಾಗಿದೆ, ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಇದೀಗ ವಿಡಿಯೋ ವೈರಲ್ ಆಗಿರುವ ಕಾರಣ ನಾಲ್ವರನ್ನು ಬಂಧಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ರಾಜ್ಯ ಸರ್ಕಾರವನ್ನು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಕೂಡ ನಡೆದಿದೆ. ಇನ್ನೂ ಸುಪ್ರೀಂ ಕೋರ್ಟ್ ಕೂಡ ನೀವು ಕ್ರಮ ತೆಗೆದುಕೊಳ್ಳಿ, ಸಾಧ್ಯವಾಗದಿದ್ದಾರೆ ನಾವು ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಪ್ರಧಾನಿ ಮೋದಿ ಕೂಡ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಇನ್ನೂ ಸಂಸತ್ನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶವನ್ನು ನೀಡಲಾಗಿದೆ. ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ, ಜತೆಗೆ ಸದನದಲ್ಲಿ ಪ್ರತಿಭಟನೆ ಕೂಡ ಪ್ರಾರಂಭವಾಗಿದೆ.