ದಾಂಡೇಲಿ : ಬರಲಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಶಾಂತಿ ಪಾಲನಾ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ಎಸ್.ಲೋಕಾಪುರ ಅವರು ದಾಂಡೇಲಿಯ ಜನ ಶಾಂತಿ, ಸೌಹಾರ್ತತೆಗೆ ವಿಶೇಷವಾದ ಒತ್ತನ್ನು ಕೊಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಬರಲಿರುವ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ನಡೆಸುವಂತೆ ವಿನಂತಿಸಿದರು. ನಗರದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಗರದ ನಾಗರಿಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನಗರದ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆಂದು ಹೇಳಿದರು.
ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ಮತ್ತು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರು ತಮ್ಮ ತಮ್ಮ ಇಲಾಖೆಗಳ ಬಗ್ಗೆ ವಿವರಿಸಿ, ಸಹಕಾರದ ಭರವಸೆ ನೀಡಿ, ನಿಯಾಮವಳಿಗಳನ್ನು ಪಾಲಿಸುವಂತೆ ಕರೆ ನೀಡಿದರು.
ಸಭೆಯನ್ನು ನಿವೃತ್ತ ಪ್ರಾಚಾರ್ಯರಾದ ಯು.ಎಸ್.ಪಾಟೀಲ್ ಮಾತನಾಡಿದರು. ಸಭೆಯಲ್ಲಿ ನಗರದ ವಿವಿಧ ಮೊಹರಂ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಿಎಸ್ಐ ಐ.ಆರ್.ಗಡ್ಡೇಕರ್ ಸ್ವಾಗತಿಸಿದರು. ತನಿಖಾ ವಿಭಾಗದ ಪಿಎಸ್ಐ ಯಲ್ಲಪ್ಪ.ಎಸ್ ವಂದಿಸಿದರು. ನಾಗರಾಜ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.