54 ವರ್ಷಗಳ ನಂತರ ಪ್ಯಾರೀಸ್​ನಿಂದ ಬಂದ ಪತ್ರ

ಈಗೇನಿದ್ದರೂ ಮೇಲ್​ಕಾಲ, ಮೊಬೈಲ್​ಕಾಲ. ಹಾಗಾಗಿ ಪೋಸ್ಟ್​ಕಾರ್ಡ್​ ಅಂತರದೇಶಿ ಪತ್ರಗಳ ಮೇಲೆ ಅವಲಂಬಿತರಾಗಿರುವವರು ಇಲ್ಲವೆಂದೇ ಹೇಳಬಹುದು. ಆದರೆ ಪತ್ರೋತ್ತರ ಕಾಲದಲ್ಲಿ ಅದೊಂದೇ ಸಂವಹನ ಮಾರ್ಗ. ಹಾಗಾಗಿ ಪತ್ರಗಳಿಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಕೆಲವೊಮ್ಮೆ ಅವು ತಡವಾಗಿಯೂ ತಲುಪುತ್ತಿದ್ದವು, ತಡವೆಂದರೆ ವಾರ ಎರಡು ವಾರ ಬಹಳ ಎಂದರೆ ಮೂರು ವಾರ ಎಂದುಕೊಳ್ಳಬಹುದು. ಆದರೆ ಇದೀಗ ವೈರಲ್ ಆಗಿರುವ ಈ ಪತ್ರ ಬರೋಬ್ಬರಿ 54 ವರ್ಷಗಳ ನಂತರ ತಲುಪಿದೆ.

ಫೇಸ್‌ಬುಕ್ ಖಾತೆದಾರರಾದ ಜೆಸ್ಸಿಕಾ ಮೀನ್ಸ್ ಈ ಪತ್ರವುಳ್ಳ ಪೋಸ್ಟ್​ ಹಂಚಿಕೊಂಡಿದ್ದಾರೆ. ‘ಈ ಪೋಸ್ಟ್​ ಅನ್ನು ರೀಶೇರ್​ ಮಾಡಿಕೊಳ್ಳಿ. ಈ ಮೂಲಕ ಇದರ ರಹಸ್ಯ ಬಿಡಿಸಲು ಸಹಾಯ ಮಾಡಿ. ಈ ಪತ್ರವನ್ನು ಯಾರು ಬರೆದಿರಬಹುದು ಎಂಬ ಸುಳಿವು ಸಿಗಬಹುದು.’ ಎಂದಿದ್ದಾರೆ.

‘ಈ ಪೋಸ್ಟ್​ ಕಾರ್ಡ್​ ಮೇಲೆ ಮಿಸ್ಟರ್ ಅಂಡ್​ ಮಿಸೆಸ್​ ರೆನೆ ಗ್ಯಾಗ್ನನ್ಸ್​​​ ಎಂದು ಬರೆಯಲಾಗಿದೆ. ಇದನ್ನು 1969ರ ಮಾರ್ಚ್​​ 15ರಂದು ಪ್ಯಾರೀಸ್​ನಿಂದ ಪೋಸ್ಟ್​ ಮಾಡಲಾಗಿದೆ. ತಲ್ಲಹಸ್ಸಿಯ ಪೋಸ್ಟ್​ ಅನ್ನು ಇದು ತಲುಪಿದ್ದು 2023ರ ಜು. 12ರಂದು. ಇದರ ಮೇಲೆ ಪೋಸ್ಟ್​ ಆಫೀಸಿನ ದಿನಾಂಕ ಮುದ್ರೆಯನ್ನೂ ಕಾಣಬಹುದಾಗಿದೆ. ಪೋರ್ಟ್‌ಲ್ಯಾಂಡ್‌ನ ಅಲೆನ್ ಅವೆನ್‌ನಲ್ಲಿರುವ ನನ್ನ ಮನೆಯ ಮೂಲ ಮಾಲಿಕರ ಹೆಸರು ಗ್ಯಾಗ್ನನ್ಸ್​. 1930ರಲ್ಲಿ ಈ ಮನೆಯನ್ನು ಕಟ್ಟಿದ್ದಾರೆ. ಅಕ್ಕಪಕ್ಕದ ಮನೆಯವರ ಪ್ರಕಾರ 1980ರ ತನಕವೂ ಅವರು ಇಲ್ಲಿ ವಾಸವಾಗಿದ್ದರು.’ ಎಂದಿದ್ದಾರೆ ಜೆಸ್ಸಿಕಾ.

ಈ ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಕೆಲವರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ ಈ ಪತ್ರದಲ್ಲಿರುವ ವಿಳಾಸಿಗರು ನಿಮಗೆ ಸಂಬಂಧಿಯೇ? ಎಂದು ಕೆಲವರನ್ನು ಟ್ಯಾಗ್ ಮಾಡಿ ಕೇಳಿದ್ಧಾರೆ.