ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಸಾಗುತ್ತಿದೆ. ಮೊದಲ ದಿನ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿದ್ದು, ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ಡೊಮಿನಿಕಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಡಿದಂತೆ ಎರಡನೇ ಟೆಸ್ಟ್‌ನಲ್ಲಿ ಕೂಡ ಓಪನರ್ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು.
31.4 ಓವರ್ ವರೆಗೆ ಆಡಿದ ರೋಹಿತ್-ಜೈಸ್ವಾಲ್ ಮೊದಲ ವಿಕೆಟ್ಗೆ 139 ರನ್ಗಳ ಕಾಣಿಕೆ ನೀಡಿದರು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಚೊಚ್ಚಲ ಪಂದ್ಯದಲ್ಲಿ 171 ರನ್ ಗಳಿಸಿದ್ದ ಜೈಸ್ವಾಲ್ ತನ್ನ ದ್ವಿತೀಯ ಪಂದ್ಯದಲ್ಲಿ 74 ಎಸೆತಗಳಲ್ಲಿ 57 ರನ್ ಸಿಡಿಸಿದರು. ಇತ್ತ ರೋಹಿತ್ 143 ಎಸೆತಗಳಲ್ಲಿ 80 ರನ್ ಗಳಿಸಿ ಸತತ ಎರಡನೇ ಶತಕ ಬಾರಿಸುವಲ್ಲಿ ಎಡವಿದರು. ಹಿಟ್ಮ್ಯಾನ್ ಬ್ಯಾಟ್ನಿಂದ 9 ಫೋರ್ ಮತ್ತು 2 ಸಿಕ್ಸರ್ಗಳಿದ್ದವು.
ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಜೊಮಲ್ ವರಿಕನ್ ಅವರ ಸ್ಪಿನ್ ಮೋಡಿಗೆ ಔಟಾದರು. 39 ಓವರ್ನ ಐದನೇ ಎಸೆತದಲ್ಲಿ ಸ್ಟಂಪ್ಔಟ್ಗೆ ಬಲಿಯಾದರು. ಕ್ರೀಸ್ಗೆ ಕಚ್ಚಿ ನಿಂತಿದ್ದ ರೋಹಿತ್ ಅಚಾನಕ್ ಆಗಿ ಔಟಾಗಿದ್ದು ಕೋಪ ತರಿಸಿತು. ಮೊದಲ ಟೆಸ್ಟ್‌ನಲ್ಲಿ 103 ರನ್ ಗಳಿಸಿದ್ದ ರೋಹಿತ್ ಈ ಬಾರಿ 80 ರನ್ಗೆ ಔಟಾದಾಗ ಸಿಟ್ಟಿನಲ್ಲಿ ಬ್ಯಾಟ್ ಅನ್ನು ಎಸೆಯಲು ಮುಂದಾದರು.
ರೋಹಿತ್ ಶರ್ಮಾ ವಿಶೇಷ ದಾಖಲೆ:
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಟೀಮ್ ಇಂಡಿಯಾ ಪರ ನೂತನ ದಾಖಲೆಯನ್ನು ಬರೆದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 80 ರನ್ ಬಾರಿಸಿದ ರೋಹಿತ್, ಎಂಎಸ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ 5 ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಖಾತೆಯಲ್ಲಿ ಪ್ರಸ್ತುತ 17298 ರನ್‌ಗಳಿದ್ದು, ಕ್ರಮವಾಗಿ 17266 ಮತ್ತು 17253 ರನ್ ಬಾರಿಸಿರುವ ಎಂಎಸ್ ಧೋನಿ ಮತ್ತು ವಿರೇಂದ್ರ ಸೆಹ್ವಾಗ್ ಅವರನ್ನು ಮೀರಿಸಿದ್ದಾರೆ.