ಮುಂದಿನ ರಾಜಕೀಯ ಭವಿಷ್ಯದಿಂದ ಯಾವುದೇ ಮೈತ್ರಿಕೂಟ ಸೇರದಿರಲು ಜೆಡಿಎಸ್​ ನಿರ್ಧಾರ

ಬೆಂಗಳೂರು, (ಜುಲೈ 21): ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್​ ಶಾಸಕರಲ್ಲಿಒಮ್ಮತ ಮೂಡಿ ಬಾರದ ಹಿನ್ನೆಲೆಯಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಸದ್ಯಕ್ಕೆ ದೂರ ಉಳಿಯಲು ದಳಪತಿಗಳು ತೀರ್ಮಾನಿಸಿದ್ದಾರೆ. ನಿನ್ನೆ(ಜುಲೈ 20) ಸಂಜೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಒಪ್ಪಂದ ರಾಜಕೀಯ ಬೇಡ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರಿಂದ ಮುಂದಿನ ರಾಜಕೀಯ ಭವಿಷ್ಯದಿಂದ ಯಾರ ಜೊತೆ ಮೈತಿ ಬೇಡ ಎಂದು ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೆಗೌಡಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಾವು ಯಾರ ಜೊತೆ‌ ಒಪ್ಪಂದ ಮಾಡಿಕೊಳ್ಳೊದು ಬೇಡ. ಸ್ವತಂತ್ರವಾಗಿ ಚುನಾವಣೆಯಲ್ಲಿ ಹೋರಾಟ ಮಾಡೋಣ. ಒಪ್ಪಂದ ಮಾಡಿಕೊಂಡರೆ ಲೋಕಸಭಾ ಚುನಾವಣೆಗೆ ಬೇರೆಯ ಸಂದೇಶ ರವಾನೆ ಆಗುತ್ತದೆ. ಮೈತ್ರಿ ಕೂಟಕ್ಕೆ ಸೇರಿದರೆ ಕೆಲ ಸಮುದಾಯಗಳ ನೇರ ನೇರ ವಿರೋಧ ಕಟ್ಟಿಕೊಳ್ಳಬೇಕು. ಅದು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಷ್ಟವಾಗುತ್ತದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು. ಹೀಗಾಗಿ ಮೈತ್ರಿಯ ವಿಚಾರವಾಗಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.

ಈ ಹಿಂದೆ ಕಾಂಗ್ರೆಸ್ ಜೊತೆ ನೇರ ಒಪ್ಪಂದ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತವಾದೆವು. ಮೈತ್ರಿ ಬದಲು ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಎರಡರಿಂದ ಮೂರು ಸ್ಥಾನ ಗೆಲ್ಲಲು ಅವಕಾಶವಾಗುತ್ತದೆ. ಬಿಜೆಪಿ ಜೊತೆ ಕೈಜೋಡಿಸಿದರೆ ಕಾಂಗ್ರೆಸ್​ಗೆ ಅಸ್ತ್ರವಾದಂತಾಗುತ್ತದೆ. ಮೈತ್ರಿಯ ವಿಚಾರವನ್ನೇ ಲೋಕಸಭಾ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಇದರಿಂದ ಹಳೆ ಮೈಸೂರು ಭಾಗದಲ್ಲಿ ಮತ್ತೆ ಜೆಡಿಎಸ್ ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು ಎಂದು ಕೆಲಸ ಶಾಸಕರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವರಿಷ್ಠರ ಮುಂದೆ ತಿಳಿಸಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ದೇವೇಗೌಡ ಎನ್​ಡಿಎ ಮೈತ್ರಿಕೂಟ ಸೇರಲು ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಆಡಳಿತ ಪಕ್ಷ ಕಾಂಗ್ರೆಸ್​ ವಿರುದ್ಧ ಸಿಡಿದೆದ್ದಿದೆ. ಪ್ರಯೊಂದು ವಿಚಾರದಲ್ಲೂ ಸಹ ಕುಮಾರಸ್ವಾಮಿ ಅವರು ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದು, ಮೈತ್ರಿ ಮಾಡಿಕೊಳ್ಳುವ ಉತ್ಸಹದಲ್ಲಿದ್ದಾರೆ. ಆದ್ರೆ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಮೈತಿಯ ವಿಚಾರವಾಗಿ ಸದ್ಯಕ್ಕೆ ಶಾಸಕರಿಂದ ಸಂಪೂರ್ಣ ಒಮ್ಮತ ಇಲ್ಲದ ಕಾರಣ ದೇವೇಗೌಡ್ರು ಬಿಜೆಪಿಯೊಂದಿಗೆ ಮೈತ್ರಿಯಿಂದ ಸದ್ಯಕ್ಕೆ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.