ಜೋಯಿಡಾ ತಾಲ್ಲೂಕಿನ ಫಣಸೋಲಿ ವನ್ಯಜೀವಿ ವಲಯದ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಭೇಟೆ : ಮೂವರ ಬಂಧನ

ಜೋಯಿಡಾ : ಜಿಂಕೆಯನ್ನು ಭೇಟೆಯಾಡಿ ಕೊಂದಿರುವ ಘಟನೆ ಜೋಯಿಡಾ ತಾಲ್ಲೂಕಿನ ಫಣಸೋಲಿ ವನ್ಯಜೀವಿ ವಲಯದ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.

ಜೋಯಿಡಾ ತಾಲ್ಲೂಕಿನ ಫನಸೋಲಿ ವನ್ಯಜೀವಿ ವಲಯದ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಗಂಡು ಜಿಂಕೆಯನ್ನು ಭೇಟೆಯಾಡಿ ಕೊಂದು ಆನಂತರ ಅದರ ದೇಹದಿಂದ ತಲೆ, ಚರ್ಮ, ಮಾಂಸವನ್ನು ಬೇರ್ಪಡಿಸಿ ತಮ್ಮ ತಮ್ಮೊಳಗೆ ಹಂಚಿಕೊಂಡು ಮನೆಗೆ ಸಾಗಿಸಿ ಅಡಗಿಸಿಟ್ಟ ಖಚಿತ ಮಾಹಿತಿಯಡಿ, ವನ್ಯಜೀವಿ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ.ಎಂ.ವಿ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿಯವರ ನೇತೃತ್ವದೊಂದಿಗೆ ಉಪ ವಲಯಾರಣ್ಯಾಧಿಕಾರಿ ಅಣ್ಣಪ್ಪ ಮುದುಕಣ್ಣವರ್, ಸಿಬ್ಬಂದಿಗಳಾದ ಶೇಖರ್ ಪಮ್ಮಾರ್, ಪರಮೇಶ್ವರ ಪಾಟೀಲ್, ಹೈದರಾಲಿ ಹಾಗೂ ಕಾವಲುಗಾರರು ಮತ್ತು ವಾಹನ ಚಾಲಕರು ಸೇರಿ ಪ್ರಕರಣವನ್ನು ಬೇಧಿಸಿ, 25.72 ಕಿಲೋ ಜಿಂಕೆಯ ಮಾಂಸ ಮತ್ತು ತಲೆ, ಚರ್ಮ 11.10 ಕಿಲೋ ವನ್ನು ಜಪ್ತು ಮಾಡಿ ಮೂವರು ಆರೋಪಿಗಳಾದ ಸ್ಥಳೀಯ ವಿರ್ನೋಲಿ ನಿವಾಸಿಗಳಾದ ವಿಷ್ಣು ಕೃಷ್ಣಾ ಕಲ್ಮೂಲಕರ, ಕೇಶವ ಬಾರಕೇಲೂ ಹರಿಜನ ಮತ್ತು ಸುರೇಶ್ ಅಂಬು ಮುದಾಯಕರ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿರ್ನೋಲಿ ನಿವಾಸಿಗಳಾದ ಕೃಷ್ಣಾ ವಿಷ್ಣು ಕಲ್ಮೂಲಕರ, ಮಂಜುನಾಥ್ ವಿಷ್ಣು ಕಲ್ಮೂಲಕರ, ಉಮಾಕಾಂತ ನಾರಾಯಣ ಧರಣಿ, ಉಮೇಶ್ ನಾರಾಯಣ ಧರಣಿ ಇವರ ಮೇಲೆ ಪ್ರಕರಣ ದಾಖಲಾಗಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ. ಜಿಂಕೆ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಏಳು ಜನರ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.