ಬೆಂಗಳೂರಿನಲ್ಲಿ ಹ್ಯಾಂಡ್​​ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ, ಎಲ್ಲೆಡೆ ಕಟ್ಟೆಚ್ಚರ

ಬೆಂಗಳೂರು, ಜುಲೈ 20: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರ ಪೈಕಿ ಒಬ್ಬನ ನಿವಾಸದಲ್ಲಿ ಹ್ಯಾಂಡ್​​ ಗ್ರೆನೇಡ್ ಪತ್ತೆಯಾಗಿರುವುದು ಪೊಲೀಸರಲ್ಲಿ ಆತಂಕಕ್ಕೆ ಕಾರಣವಾಗಿದೆ. ಶಂಕಿತ ಉಗ್ರ ಜಾಹೀದ್​​ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿ 4 ಗ್ರೆನೇಡ್ ಪತ್ತೆಯಾಗಿದೆ. ಈವರೆಗೂ ರಾಜ್ಯದಲ್ಲಿ ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ. ಆದರೆ, ಇದೀಗ ಸಿಲಿಕಾನ್ ಸಿಟಿಯಲ್ಲಿ ಒಂದೇ ಬಾರಿಗೆ ನಾಲ್ಕು ಸಜೀವ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.

ಈ ಹಿಂದೆ 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಐದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ಆದರೆ, ಅವುಗಳು 40 ವರ್ಷಗಳಷ್ಟು ಹಳೆಯವು ಎನ್ನಲಾಗಿದ್ದು, ನೆಲದಡಿಯಲ್ಲಿ ಪತ್ತೆಯಾಗಿದ್ದವು.

ನಂತರ 2022 ರಲ್ಲಿ ಅಥಣಿ ಬಳಿಯ ಶಾಲೆಯೊಂದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು. ಮಕ್ಕಳು ಚೆಂಡು ಎಂದು ಭಾವಿಸಿ ಆಟವಾಡುವಾಗ ಪತ್ತೆಯಾಗಿದ್ದ ಅದು ನಿರ್ಜೀವ ಗ್ರೆನೇಡ್ ಆಗಿತ್ತು. ಆನಂತರ ಇದೇ ಮೊದಲ ಬಾರಿಗೆ ಗ್ರೆನೇಡ್, ಅದೂ ಸಜೀವ ಗ್ರೆನೇಡ್ ಪತ್ತೆಯಾಗಿದೆ.

ಡಿಟೋನೇಟರ್ ತಂತ್ರಜ್ಞಾನದಿಂದ ತಯಾರಾಗುವ ಸ್ಪೋಟಕವೇ ಗ್ರೆನೇಡ್. ಇದು ಸೇಫ್ಟಿ ಫಿನ್ ಅಥವಾ ಕಾಟರ್ ಪಿನ್​​​ನಿಂದ ನಿಯಂತ್ರಿಸಲ್ಪಡುತ್ತದೆ. ಈ ಹ್ಯಾಂಡ್ ಗ್ರೆನೇಡ್​​​ಗಳಲ್ಲಿ ರಾಸಾಯನಿಕ ಗ್ರೆನೇಡ್​​ಗಳು, ಸ್ಟನ್ ಗನ್ ಗ್ರೆನೇಡ್​​​ಗಳು, ಭಾರಿ ಸ್ಪೋಟಕದ ಗ್ರೆನೇಡ್​​​ಗಳು ಹೀಗೆ ಹಲವು ವಿಧಗಳಿವೆ. ಇವುಗಳು ಕೇವಲ ಕೆಲವೊಂದು ಆಡಿಗಳಷ್ಟು ಮಾತ್ರ ಪರಿಣಾಮ ಬೀರುತ್ತವೆ. ಆದರೆ ವಿದೇಶಿ ಗ್ರೆನೇಡ್​​​ಗಳಾದ Dam51, mk3a2 ಗ್ರೆನೇಡ್​​ಗಳು ಭಾರಿ ಪ್ರಮಾಣ ಸ್ಪೋಟ ಉಂಟುಮಾಡುತ್ತವೆ. 40 ಮೀಟರ್ ನಿಂದ 200 ಮೀಟರ್ ವರೆಗೂ ಈ ಗ್ರೆನೇಡ್ ಗಳು ಪರಿಣಾಮ ಬೀರುತ್ತವೆ. ಹೀಗಾಗಿ ಈಗ ಸಿಕ್ಕಿರುವ ಗ್ರೆನೇಡ್​​​ಗಳ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಾಂಬ್ ಸ್ಕ್ವಾಡ್ ಕರೆದುಕೊಂಡು ಹೋಗಿ ಆರೋಪಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಸಜೀವ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು.