ಕಾಂಗ್ರೆಸ್​​ ಕಾರ್ಯಕರ್ತರು ಯುವ ಬ್ರಿಗೇಡ್ ಕಾರ್ಯಕರ್ತನನ್ನು ಹೊಡೆದಿದ್ದಾರೆ: ಚಕ್ರವರ್ತಿ ಸೂಲಿಬೆಲೆ ಆರೋಪ

ಬೆಂಗಳೂರು: ಕಾಂಗ್ರೆಸ್​ನ​ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಯುವ ಬ್ರಿಗೇಡ್ ಕಾರ್ಯಕರ್ತ  ವೇಣುಗೋಪಾಲ್ ಅವರನ್ನು ಹೊಡೆದಿದ್ದಾರೆ ಎಂದು ವಾಗ್ಮಿಯೂ ಆಗಿರುವ ಯುವ ಬ್ರಿಗೇಡ್​ ಮುಖ್ಯಸ್ಥ ಚಕ್ರಚರ್ತಿ ಸೂಲಿಬೆಲೆ  ಆರೋಪಿಸಿದ್ದಾರೆ. ಬೈಕ್​ ನಿಲ್ಲಿಸುವ ವಿಚಾರ, ಪುನೀತ್​ ಫೋಟೋ ವಿಚಾರ ನೆಪ ಅಷ್ಟೇ. ಹನುಮ ಜಯಂತಿ ಆಗಬಾರೆಂದು ಈ ರೀತಿ ಕೃತ್ಯ ವೆಸಗಿದ್ದಾರೆ. ಸುನೀಲ್​ ಬೋಸ್​ ಜತೆ ಇದ್ದವರೇ ಈ ಕೃತ್ಯವೆಸಗಿದ್ದಾರೆ ಅಂತಿದ್ದಾರೆ ಎಂದು ಹೇಳಿದರು.

ನಾಳೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂತಾಪ ಸೂಚಿಸುವ ಕಾರ್ಯಕ್ರಮ ಆಯೋಜಿಸಿ ಸಂತಾಪ ಸೂಚಿಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಮೂಲಕ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೋರಿ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ಮತ್ತೊಂದು ಪಶ್ಚಿಮ ಬಂಗಾಳವಾಗಲಿದೆ

ಹತ್ಯೆ ಬಗ್ಗೆ ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ, “ಸಿದ್ದರಾಮಯ್ಯ 2.0 ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತಿದೆ. ಹನುಮ ಜಯಂತಿಯ ಸಕ್ರಿಯ ಸಂಘಟಕರಾಗಿದ್ದ ಕಾರಣ ನಾವು ನಿನ್ನೆ ನಮ್ಮ ಸ್ವಯಂಸೇವಕರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದೇವೆ. ಅವರನ್ನು ಕಾಂಗ್ರೆಸ್ ಬೆಂಬಲಿಗರು ಬರ್ಬರವಾಗಿ ಹತ್ಯೆ ಮಾಡಿದ್ದರು. ಕರ್ನಾಟಕ ಉರಿಯುತ್ತಿದೆ. ಶೀಘ್ರದಲ್ಲೇ ಮತ್ತೊಂದು ಪಶ್ಚಿಮ ಬಂಗಾಳ ಸಾಕ್ಷಿಯಾಗಲಿದೆ” ಎಂದಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಎಂಬವರನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಹೊರವಲಯದಲ್ಲಿ ಕೊಲೆ ಮಾಡಲಾಗಿತ್ತು. ವೇಣುಗೋಪಾಲ್ ಟಿ.ನರಸೀಪುರದ ಶ್ರೀರಾಂಪುರ ಕಾಲೋನಿ ನಿವಾಸಿಯಾಗುದ್ದು, ನಿನ್ನೆ (ಜು. 09) ಹನುಮ ಜಯಂತಿ ವೇಳೆ ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಇದು ತಾರಕಕ್ಕೆ ಏರಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿತ್ತು.