ಹೈದರಾಬಾದ್ ಜುಲೈ 20: ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರನ್ನು ಶಂಶಾಬಾದ್‌ನಲ್ಲಿ ಪೊಲೀಸರು ತಡೆದು, ಮುನ್ನಚ್ಚರಿಕೆಯಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ಬಡವರಿಗೆ ವಸತಿ ಯೋಜನೆಯ ಸ್ಥಳವನ್ನು ಪರಿಶೀಲಿಸಲು ರೆಡ್ಡಿ ಶಂಶಾಬಾದ್ ವಿಮಾನ ನಿಲ್ದಾಣದಿಂದ ಬಟಸಿಂಗಾರಂಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಘಟನೆ ನಡೆದ ಕೂಡಲೇ ಪಕ್ಷದ ಇತರ ಮುಖಂಡರೊಂದಿಗೆ ಔಟರ್ ರಿಂಗ್ ರಸ್ತೆಯಲ್ಲೇ ಕುಳಿತು ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಚಕೊಂಡ ಪೊಲೀಸ್ ಕಮಿಷನರ್ ಡಿಎಸ್ ಚೌಹಾಣ್ ಕೇಂದ್ರ ಸಚಿವರು ಮತ್ತು ಇತರ ಮುಖಂಡರ ಮನವೊಲಿಸಿ ಅಲ್ಲಿಂದ ತೆರವು ಮಾಡಲು ಯತ್ನಿಸಿದಾಗ ಕಿಶನ್ ರೆಡ್ಡಿ ಅವರು , ನಾನೇನು ಅಪರಾಧಿಯೇ? ನಾನು ಭಯೋತ್ಪಾದಕನೇ? ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗಲು ನನಗೆ ಹಕ್ಕು ಇದೆ ಎಂದು ಹೇಳಿದ್ದಾರೆ. ನಂತರ ಪೊಲೀಸರು ಕಿಶನ್ ರೆಡ್ಡಿ ಅವರನ್ನು ವಾಹನವಿದ್ದೆಡೆಗೆ ಎತ್ತಿಕೊಂಡು ಹೋಗಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಹೈದರಾಬಾದ್‌ನ ಬಟಸಿಂಗಾರಂನಲ್ಲಿರುವ ತೆಲಂಗಾಣ ಸರ್ಕಾರದ ಎರಡು ಮಲಗುವ ಕೋಣೆಗಳ ವಸತಿ ನಿವೇಶನಕ್ಕೆ ಭೇಟಿ ನೀಡುವ ಯೋಜನೆಯನ್ನು ರೆಡ್ಡಿ ಘೋಷಿಸಿದ್ದರು. ಎರಡು ಬೆಡ್‌ರೂಮ್‌ಗಳ ನಿವೇಶನಕ್ಕೆ ಭೇಟಿ ನೀಡುವ ಬಿಜೆಪಿ ನಾಯಕರನ್ನು ಪೊಲೀಸ್ ಗೃಹಬಂಧನ ಮಾಡಿದ್ದನ್ನು ಈ ಹಿಂದೆ ಕಿಶನ್ ರೆಡ್ಡಿ ಖಂಡಿಸಿದ್ದರು.
ತೆಲಂಗಾಣದ ಬಿಆರ್‌ಎಸ್ ಸರ್ಕಾರ ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸದೆ ಮತ್ತು ಪೂರ್ಣಗೊಂಡ ಮನೆಗಳನ್ನು ವಿತರಿಸದೆ ಜನರನ್ನು ವಂಚಿಸುತ್ತಿದೆ ಎಂದು ರೆಡ್ಡಿ ಆರೋಪಿಸಿದರು.
ಇಂದು ಕೇಂದ್ರ ಸಚಿವನಾಗಿ ನಾನು ಬ್ಯಾಟಸಿಂಗಾರಂಗೆ ಭೇಟಿ ನೀಡಿ ಅಲ್ಲಿನ ಡಬಲ್ ಬೆಡ್‌ರೂಮ್ ಮನೆಗಳನ್ನು ಪರಿಶೀಲಿಸಲು ಬಯಸಿದ್ದೆ. ಆದರೆ, ಡಿ.ಕೆ.ಅರುಣ, ಈಟಾಳ ರಾಜೇಂದರ್, ರಾಮಚಂದರ್ ರಾವ್ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ನಾಯಕರನ್ನು ಬಂಧಿಸಲಾಯಿತು. ನಾವು ಕಲ್ವಕುಂಟ್ಲ ತುರ್ತು ಪರಿಸ್ಥಿತಿಯಲ್ಲಿದ್ದೇವೆಯೇ? ಮಹಾನ್ ಚಳವಳಿಯಿಂದ ಗೆದ್ದ ತೆಲಂಗಾಣ ಈಗ ಕಲ್ವಕುಂಟ್ಲ ಕುಟುಂಬದ ಹಿಡಿತದಲ್ಲಿದೆ,” ಎಂದು ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.