ಚಿಕ್ಕಬಳ್ಳಾಪುರ, ಜುಲೈ 20: ಇಡೀ ಊರಿಗೆ ಮಾದರಿಯಾಗಿದ್ದ ಪಟ್ಟಣ ಪಂಚಾಯಿತಿಯೊಂದರ ಉಪಾಧ್ಯಕ್ಷ ಹಾಗೂ ವಕೀಲರೂ ಆಗಿದ್ದ ವ್ಯಕ್ತಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂಚೂಣಿಯಲ್ಲಿದ್ದರು. ಆದರೆ ತಮ್ಮ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ, ಯಾಕೆ ಅಂತೀರಾ? ಈ ವರದಿ ನೋಡಿ. ಮೇಲಿನ ಚಿತ್ರದಲ್ಲಿರುವವರು ಜಿ.ಎಂ. ಅನಿಲಕುಮಾರ್, ವಯಸ್ಸು 45 ವರ್ಷ ಅಷ್ಟೆ, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಎರಡನೆ ವಾರ್ಡ್ ನಿವಾಸಿ. ಇದೆ ಗುಡಿಬಂಡೆ ಪಟ್ಟಣ ಪಂಚಾಯತಿಯಲ್ಲಿ ಸದಸ್ಯನಾಗಿ ನಂತರ ಉಪಾಧ್ಯಕ್ಷನಾಗಿದ್ದರು. ಜೊತೆಗೆ ವಕೀಲ ವೃತ್ತಿಯನ್ನು ಮಾಡಿಕೊಂಡಿದ್ರು. ಆದ್ರೆ ಇಂದು ಬೆಳಿಗ್ಗೆ ತಮ್ಮ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದು… ಇಡೀ ಗುಡಿಬಂಡೆ ಪಟ್ಟಣ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.
ಜಿ.ಎಂ. ಅನಿಲಕುಮಾರ್ ಗುಡಿಬಂಡೆ ಪಟ್ಟಣ ಪಂಚಾಯತಿಯಲ್ಲಿ ಪಕ್ಷೇತರ ಸದಸ್ಯರಾಗಿದ್ರು. ಮೊದಲು ಕಾಂಗ್ರೆಸ್ ಮುಖಂಡರಾಗಿದ್ದ ಅನಿಲ್ ಕುಮಾರ್, ನಂತರ ಬಿಜೆಪಿ ಸೇರ್ಪಡೆಯಾಗಿ, ಈಗ ಹಾಲಿ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿದ್ದರು. ಪಟ್ಟಣದ ಯುವಕರು, ಹಿರಿಯರು ಸೇರಿದಂತೆ ಎಲ್ಲರ ಜೊತೆ ಅನ್ಯೋನ್ಯತೆಯಿಂದ ಇದ್ದು ಮಾದರಿಯಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದರು.
ಇನ್ನು ಅನಿಲ್ ಕುಮಾರ್ ಪತ್ನಿಯೂ ವಕೀಲರಾಗಿದ್ದು ಮಕ್ಕಳ ಸಮೇತ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಪತಿ-ಪತ್ನಿ ಅನ್ಯೋನ್ಯತೆಯಿಂದಲೇ ಇದ್ದರಂತೆ. ಆದ್ರೂ ಅನಿಲ್ ಕುಮಾರ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಅನ್ನೊದು ಅವರ ಸ್ನೇಹಿತರು ಬಂಧು ಬಳಗಕ್ಕೆ ಸದ್ಯಕ್ಕೆ ಅರ್ಥವಾಗದ ವಿಷಯವಾಗಿದೆ.
ಜಿ.ಎಂ. ಅನಿಲಕುಮಾರ್ ರಾತ್ರಿ ಮನೆಯಲ್ಲಿಯೇ ಇದ್ರಂತೆ, ರಾತ್ರಿ ಒಂದೂವರೆ ಸಮಯದಲ್ಲಿ ಫೋನ್ ಬಂತು ಅಂತ ಮಾತನಾಡಲು ಮನೆಯ ಮೇಲೆ ಇರುವ ರೂಮ್ ಗೆ ಹೋಗಿದ್ದಾರೆ. ಅಲ್ಲಿ ಡೆತ್ ನೋಟ್ ಬರೆದು ಇಟ್ಟಿದ್ದು ಅದರಲ್ಲಿ, ತನ್ನ ಸಾವಿಗೆ ತಾನೇ ಹೊಣೆ, ತನ್ನನ್ನು ಸಾಲಮುಕ್ತನನ್ನಾಗಿ ಮಾಡುವಂತೆ ಹಾಗೂ ಇರುವ ಮನೆಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಸಾಲ ತೀರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಯಾರು ಯಾರಿಗೆ, ಎಷ್ಟೆಷ್ಟು ಸಾಲ ಕೊಡಬೇಕು ಅನ್ನೊದನ್ನು ಸಹ ಉಲ್ಲೇಖಿಸಿದ್ದಾರಂತೆ.
ಮೃತ ಅನಿಲಕುಮಾರ್ ಅವರ ಪತ್ನಿ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.