ಹುಬ್ಬಳ್ಳಿ, ಜುಲೈ 20: ಮುಂಗಾರು ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ತಾವು ಹಾಕಿದ ಅಲ್ಪ ಸ್ವಲ್ಪ ಬೆಳೆಯನ್ನಾದರೂ ಉಳಿಸಿಕೊಳ್ಳಬೇಕೆಂದು ಬಿಯರ್ ಬಾಟಲಿ ಮೊರೆ ಹೋಗಿದ್ದಾರೆ. ಜಿಂಕೆಗಳಿಂದ ಬೆಳೆಗಳ ರಕ್ಷಣೆ ಮಾಡಲು ಜಮೀನುಗಳಲ್ಲಿ ಬಿಯರ್ ಬಾಟಲಿಗಳನ್ನು ಅಳವಡಿಸಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಬಿಯರ್ ಬಾಟಲಿಗಳನ್ನು ಅಳವಡಿಸಿ ಬೆಳೆ ರಕ್ಷಣಗೆ ಹೊಸ ತಂತ್ರದ ಮೊರೆ ಹೋಗಿದ್ದಾರೆ.
ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನರ್ತಿ, ಯರಿನಾರಯಣಪುರದಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದೆ. ಜಿಂಕೆಗಳು ಹಿಂಡು ಹಿಂಡಾಗಿ ಬಂದು ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡ್ತಿವೆ. ಶೇಂಗಾ, ಹೆಸರು, ಉದ್ದು, ಸೋಯಾಬಿನ್, ಮೆಣಸಿನಕಾಯಿ ಇತ್ಯಾದಿ ಬೆಳೆಗಳ ರಕ್ಷಣೆಗೆ ರೈತರು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಹಗಲು-ರಾತ್ರಿ ಜಿಂಕೆಗಳನ್ನು ಓಡಿಸಲಾಗದೆ ಅಸಹಾಯಕರಾಗಿದ್ದಾರೆ. ಸದ್ಯ ರೈತರು ಇದಕ್ಕೊಂದು ಉಪಾಯವೊಂದನ್ನು ಕಂಡುಕೊಂಡಿದ್ದು ಕುಡಿದು ಬಿಸಾಡಿದ ಬಿಯರ್ ಬಾಟಲಿಗಳನ್ನೇ ಜಿಂಕೆಗಳ ವಿರುದ್ಧ ಅಸ್ತ್ರ ಮಾಡಿಕೊಂಡಿದ್ದಾರೆ.
ಗಾಳಿಗೆ ಬಿಯರ್ ಬಾಟಲ್ ಒಂದಕ್ಕೊಂದು ತಾಗಿ ಜೋರಾದ ಸದ್ದು ಬರುತ್ತೆ. ಈ ಸದ್ದಿಗೆ ಬೆದರಿ ಜಿಂಕೆಗಳು ಓಡುತ್ತಿವೆ. ಸದ್ಯ ಬೆಳೆಗಳನ್ನು ರಕ್ಷಿಸಲು ಇದೊಂದು ಉಪಾಯ ಸಿಕ್ಕಿದ್ದು ಜಿಂಕೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜಿಂಕೆಗಳನ್ನು ಹೊಲಗಳತ್ತ ಬಾರದಂತೆ ತಡೆಯಬೇಕು. ಕಾಡಿನತ್ತ ಜಿಂಕೆಗಳ ಹಿಂಡನ್ನು ಕೊಂಡೊಯ್ಯಬೇಕು. ಜಿಂಕೆಗಳ ಹಾವಳಿಯಿಂದ ಆದ ಬೆಳೆ ಹಾನಿಗೆ ಪರಿಹಾರ ಕಟ್ಟಿಕೊಡಲು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದು ಇದರ ನಡುವೆ ಜಿಂಕೆಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ಅಲ್ಪ ಸಲ್ಪ ಬೆಳೆದ ಬೆಳೆಯನ್ನಾದರೂ ಉಳಿಸಿಕೊಳ್ಳಬೇಕೆಂದು ಹರಸಾಹಸಪಡುತ್ತಿದ್ದಾರೆ.