ಕಾರವಾರ, ಜುಲೈ 19: ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಹಾಗೂ ಗಡಿ ತಾಲೂಕುಗಳಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕೆಲವೇ ವರ್ಷಗಳಲ್ಲಿ 13 ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. 2017 ರಿಂದ 2023 ರ ವರಗೆ ಕಾರವಾರ ತಾಲೂಕಿನಲ್ಲಿ ಒಟ್ಟು 13 ಕನ್ನಡ ಶಾಲೆಗಳು ಬಂದ್ ಆಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 3 ಕನ್ನಡ ಶಾಲೆಗಳು ಬಂದ್ ಆಗಿವೆ.
ವಿದ್ಯಾರ್ಥಿಗಳಿಲ್ಲದ ಕಾರಣ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇಂಗ್ಲಿಷ್ ಶಿಕ್ಷಣದ ವ್ಯಾಮೋಹಕ್ಕೆ ಪೋಷಕರು ಕನ್ನಡ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಪರಿಣಾಮವಾಗಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದೆ. ಅಂಥ ಶಾಲೆಗಳು ಮುಚ್ಚಲ್ಪಡುತ್ತಿವೆ.
ಇಂಗ್ಲಿಷ್ ಭಾಷೆ ಮೇಲಿನ ವ್ಯಾಮೋಹ ಮಾತ್ರವಲ್ಲದೆ, ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸುಸಜ್ಜಿತ ಕಟ್ಟಡಗಳು ಇಲ್ಲದಿರುವುದು ಕೂಡ ಪಾಲಕರು ಮಕ್ಕಳನ್ನು ಕಳುಹಿಸುವುದಕ್ಕೆ ಹಿಂದೇಟು ಹಾಕಲು ಕಾರಣ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿವೆ.
ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನ ಬಂದ್ ಮಾಡಬಾರದು ಎಂದು ಕಾರವಾರದಲ್ಲಿ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದು ಕನ್ನಡ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ನರೇಂದ್ರ ತಾಳೆಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅನುದಾನಿತ ಪ್ರೌಡ ಶಾಲೆ ಸಹ ಬಂದ್ ಆಗುವ ಹಂತಕ್ಕೆ!
ಗೋವಾ ಗಡಿಯಲ್ಲಿ ಬರುವ ಕಾರವಾರ ತಾಲೂಕಿನಲ್ಲಿ ಕೊಂಕಣಿ, ಮರಾಠಿ ಭಾಷಿಗರೂ ಹೆಚ್ಚಿದ್ದರು ಕನ್ನಡ ಶಾಲೆಗಳಿಗೆ ಈ ಹಿಂದೆ ಸಾಕಷ್ಟು ಬೇಡಿಕೆ ಇತ್ತು. ಗಡಿಭಾಗದಲ್ಲಿ ಸರ್ಕಾರದ ಶಾಲೆಗಳ ಜೊತೆ ಹಲವು ಅನುಧಾನಿತ ಕನ್ನಡ ಶಾಲೆಗಳು ತಲೆ ಎತ್ತಿದ್ದವು. ಆದರೆ ಕಳೆದ ಕೆಲ ವರ್ಷದಿಂದ ಗಡಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಹಲವು ಶಾಲೆಗಳು ಬಂದ್ ಆಗಿದೆ. 2017-18 ನೇ ಸಾಲಿನಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದರೆ, 2019-20 ನೇ ಸಾಲಿನಲ್ಲಿ ಎರಡು, 20-21 ನೇ ಸಾಲಿನಲ್ಲಿ ಒಂದು ಶಾಲೆ, 2021-22 ನೇ ಸಾಲಿನಲ್ಲಿ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿತ್ತು. 2022-23ನೇ ಸಾಲಿನಲ್ಲೂ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್ ಮಾಡಿದ್ದರೆ ಸದ್ಯ ಪ್ರಸ್ತುತ ವರ್ಷ ತಾಲೂಕಿನ ಮೂರು ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಂದ್ ಆಗಿದೆ. ಇನ್ನು ಒಂದು ಅನುದಾನಿತ ಪ್ರೌಡ ಶಾಲೆ ಸಹ ಬಂದ್ ಆಗುವ ಹಂತಕ್ಕೆ ತಲುಪಿದೆ. ಇದಲ್ಲದೇ ಸುಮಾರು ಹತ್ತು ಶಾಲೆಗಳಲ್ಲಿ ಕೇವಲ ಎರಡೇ ವಿದ್ಯಾರ್ಥಿಗಳು ದಾಖಲಾಗಿದ್ದು ಗಡಿಭಾಗದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದೆ. ಇನ್ನು 10 ಕ್ಕಿಂತ ಕಡಿಮೆ ಮಕ್ಕಳು ದಾಖಲಾತಿ ಇರುವ 40 ಕ್ಕು ಹೆಚ್ಚು ಶಾಲೆಗಳಿವೆ. ಅವುಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗುತ್ತೆ ಎಂಬುದನ್ನ ಕಾದು ನೋಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು.
ಕಾರವಾರ ತಾಲೂಕಿನಲ್ಲಿ ಕೇವಲ ಎರಡೇ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನ ಪ್ರಾರಂಭಿಸಲಾಗಿದೆ. ಶಿಕ್ಷಕರ ಕೊರತೆ ಹಾಗೂ ಇಂಗ್ಲಿಷ್ ಶಿಕ್ಷಕರ ಅಲಭ್ಯದಿಂದ ಇಂಗ್ಲಿಷ್ ಶಿಕ್ಷಣವನ್ನೂ ಕೊಡಲಾಗದೇ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಗಡಿ ಭಾಗದಲ್ಲಿ ಉಳಿಸಿ ಬೆಳೆಸಬೇಕಾಗಿದ್ದ ಕನ್ನಡ ಶಾಲೆಗಳು ಪ್ರತಿವರ್ಷ ಶೂನ್ಯ ದಾಖಲಾತಿಯಿಂದ ಮುಚ್ಚುತ್ತಾ ಬರುತ್ತಿರುವುದು ನಿಜಕ್ಕೂ ದುರಂತವೇ. ಸರ್ಕಾರ ಈ ಬಗ್ಗೆ ಗಮನಹರಿಸಿ ಗಡಿ ಭಾಗದ ಶಾಲೆಗಳ ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕಾಗಿದೆ.