ಗದಗ, : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಜೈನ ಮುನಿ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಶ್ರೀಗಳಿಗೆ ಜೀವಭಯ ಎದುರಾಗಿದೆ. ಈ ಹಿನ್ನೆಲೆ ಮಠದ ಭಕ್ತರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಮಠದಲ್ಲಿನ ಶ್ರೀಗಳ ಕೊಠಡಿಯ ಬಳಿ ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಬಂದಿದ್ದರು ಎನ್ನಲಾಗಿದೆ.
ಮಠದ ಅಂಗಳದಲ್ಲಿನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಲೈಟ್ ಆಫ್ ಮಾಡಿ ಶ್ರೀಗಳ ಕೊಣೆ ಸುತ್ತಮುತ್ತ ಓಡಾಡಿದ್ದಾರೆ. ಮೂವರು ವ್ಯಕ್ತಿಗಳು ಹಿಂದಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈಗ ಸದ್ಯ ಈ ಘಟನೆ ಗಮನಿಸಿರುವ ಪೊಲೀಸರು ತಾತ್ಕಾಲಿಕ ಗನ್ ಮ್ಯಾನ್ ನಿಯೋಜನೆ ಮಾಡುವ ಮೂಲಕ ರಕ್ಷಣೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠ ಕೂಡ ಒಂದು. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಯನ್ನಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಮಠದ ಶ್ರೀಗಳಾದ ದಿಂಗಾಲೇಶ್ವರ ಸ್ವಾಮೀಜಿಗಳನ್ನು ನೇಮಕ ಮಾಡಲಾಗಿದೆ.