ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ 19ನೇ ವರ್ಷದ ವಾರ್ಷಿಕ ವರದಿ ಬಿಡುಗಡೆ ಸಮಾರಂಭವು ಇಂದು ಬುಧವಾರ ಜರಗಿತು.
2022 -23 ನೇ ಸಾಲಿನ ಸಂಸ್ಥೆಯ ವರದಿಯನ್ನು ಕೆನರಾ ಬ್ಯಾಂಕ್ ಮಣಿಪಾಲ ವೃತ್ತದ ಪ್ರಧಾನ ವ್ಯವಸ್ಥಾಪಕರಾದ ಎಂ.ಜಿ.ಪಂಡಿತ್ ಹಾಗೂ ಯೂನಿಯನ್ ಬ್ಯಾಂಕಿನ ನಿರ್ದೇಶಕರಾದ ಲಕ್ಷ್ಮಣ ಉಪ್ಪಾರ್ ಅವರು ಬಿಡುಗಡೆಗೊಳಿಸಿದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತದ ಪ್ರಧಾನ ವ್ಯವಸ್ಥಾಪಕರಾದ ಎಂ.ಜಿ.ಪಂಡಿತ್ ಅವರು ಮಾತನಾಡಿ ಆರ್.ವಿ.ದೇಶಪಾಂಡೆಯವರು ಸಾಮಾನ್ಯ ರಾಜಕಾರಣಿಯಲ್ಲ, ಬದಲಾಗಿ ಜಿಲ್ಲೆಯ ಬಹುದೊಡ್ಡ ಹೆಮ್ಮೆ. ಅವರ ಬದ್ಧತೆ ಮತ್ತು ದೂರದೃಷ್ಟಿ ಹಾಗೂ ಚಿಂತನೆಯ ಫಲವೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಎಂದರಲ್ಲದೇ ಕೆನರಾ ಬ್ಯಾಂಕಿನಿಂದ ಈ ಸಂಸ್ಥೆಗೆ ಮತ್ತಷ್ಟು ಸಹಕಾರ ನೀಡುವ ಭರವಸೆಯನ್ನು ನೀಡಿದರು. ಸಂಸ್ಥೆಯ ಕ್ರಿಯಾಶೀಲ ಜನಪರ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳು ಅಭಿನಂದನೀಯ ಮತ್ತು ಅನುಕರಣೀಯ. ಯುವ ಜನತೆಯನ್ನು ಕೇಂದ್ರಿಕರಿಸಿಕೊಂಡು ನಡೆಸುತ್ತಿರುವ ಸ್ವ ಉದ್ಯೋಗ ತರಬೇತಿಗಳು ಸಾವಿರಾರು ಜನರ ಬದುಕಿಗೆ ಆಸರೆಯಾಗಿರುವುದು ನಿಜಕ್ಕೂ ಸಂತಸ ಸಂಗತಿ. ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಪಾತ್ರ ಸ್ಮರಣೀಯವಾಗಿದೆ ಎಂದರು.
ಯೂನಿಯನ್ ಬ್ಯಾಂಕಿನ ನಿರ್ದೇಶಕರಾದ ಲಕ್ಷ್ಮಣ ಉಪ್ಪಾರ್ ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಕೊಂಡಾಡಿ, ಜನಮಾನಸಕ್ಕೆ ಅತ್ಯವಶ್ಯಕ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿ ಶಿಸ್ತು ಪ್ರಗತಿಯ ಅಡಿಗಲ್ಲು. ಈ ನಿಟ್ಟಿನಲ್ಲಿ ನಾವು ನಮ್ಮಜೀವನದಲ್ಲಿ, ವ್ಯವಹಾರದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಧರ್ಮದರ್ಶಿ ಪ್ರಸಾದ್ ದೇಶಪಾಂಡೆಯವರು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯೊಂದಿಗೆ ಆರಂಭಗೊಂಡ ಸಂಸ್ಥೆ ವೈಶಿಷ್ಟ್ಯಪೂರ್ಣ ಕಾರ್ಯಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನದೇ ಛಾಪನ್ನು ಮೂಡಿಸಿರುವುದು ಸಂಸ್ಥೆಯ ಸಾಧನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಸಿ.ಎಸ್.ಆರ್ ಯೋಜನೆಯ ಮೂಲಕ ನೆರವು ನೀಡುತ್ತಿರುವ ಕಾರ್ಪರೇಟ್ ಕಂಪೆನಿಗಳ ಪರವಾಗಿ ಕಂಪೆನಿಗಳ ಅಧಿಕಾರಿಗಳನ್ನು ಸನ್ಮಾನಿಸಲಾಯ್ತು. ಸಂಸ್ಥೆಯಿಂದ ತರಬೇತಿ ಪಡೆದು ಯಶಸ್ವಿಯಾದ ಯಶಸ್ವಿ ಉದ್ಯಮಿಗಳನ್ನು, ಸಂಸ್ಥೆಯ ಸ್ವಸಹಾಯ ಸಂಘಗಳ ಮೂಲಕ ಯಶಸ್ವಿ ಸ್ವಾವಲಂಬಿಗಳಾದ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯ್ತು.
ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಶ್ಯಾಮ್ ಕಾಮತ್, ವಾಸುದೇವ ರಾವ್ ದೇಶಪಾಂಡೆ, ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್, ನಂದಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿ ಸ್ವಾಗತಿಸಿದರು. ಶ್ಯಾಮ್ ಕಾಮತ್ ವಂದಿಸಿದರು. ಮಹಾಬಲೇಶ್ವರ ನಾಯ್ಕ ಮತ್ತು ವೀರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.