ಜೋಯಿಡಾ : ನಮ್ಮ ದೇಶದ ಕಾನೂನು ಪ್ರತಿಯೊಬ್ಬರಿಗೂ ಬದುಕವ ಹಕ್ಕನ್ನು ನೀಡಿದೆ. ಕಾನೂನಿನ ಸಾಮಾನ್ಯ ಅರಿವು ಪ್ರತಿಯೊಬ್ಬ ನಾಗರಿಕನಿಗೂ ಅತೀ ಅವಶ್ಯವಾಗಿ ಬೇಕು. ಕಾನೂನಿನ ಅರಿವಿದ್ದವನು ಕಾನೂನನ್ನು ಗೌರವಿಸುವುದರ ಜೊತೆಗೆ ಸುಸಂಸ್ಕೃತನಾಗಿ ಬದುಕನ್ನು ರೂಪಿಸಲು ಸಾಧ್ಯವಿದೆ ಎಂದು ಜೋಯಿಡಾ ಪೊಲೀಸ್ ವೃತ್ತ ನಿರೀಕ್ಷಕರಾದ ನಿತ್ಯಾನಂದ ಪಂಡಿತ್ ಅವರು ಹೇಳಿದರು.
ಅವರು ಜೋಯಿಡಾ ತಾಲ್ಲೂಕಿನ ಮೈನೊಳದಲ್ಲಿ ಪೊಲೀಸ್ ಇಲಾಖೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪೊಲೀಸ್ ಇಲಾಖೆಯ ಸಹಾಯ ಯಾಕೆ, ಹೇಗೆ ಎನ್ನುವುದನ್ನು ವಿವರಿಸಿ, 112 ತುರ್ತು ವಾಹನದ ಉದ್ದೇಶ ಮತ್ತು ಅನುಕೂಲತೆಗಳನ್ನು ವಿವರಿಸಿದರು.
ಕಾರ್ಯಕ್ರಮವನ್ನು ಊರಿನ ಹಿರಿಯರಾದ ಮನೋಹರ್ ಮಿರಾಶಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತನಿಖಾ ವಿಭಾಗದ ಪಿಎಸೈ ಮಹಾದೇವಿ ನಾಯ್ಕೋಡಿ ಅವರು ಮಹಿಳಾ ಕಾನೂನು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಅಶೋಕ್ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಮೇಲ್ವಿಚಾರಕ ನಾರಾಯಣ ವಾಡಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.