ದಾಂಡೇಲಿ : ನಗರದ ಸುದರ್ಶನ ನಗರದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಆಕಾಶದೀಪ ಕಲಾತಂಡದ ಬೀದಿ ನಾಟಕ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಕಾಂತ ನಾಯ್ಕ ಅವರು ಚಾಲನೆಯನ್ನು ನೀಡಿ ಪರಿಸರ ಮತ್ತು ಜಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದರು. ಸಮೃದ್ಧ ಪರಿಸರ ನಿರ್ಮಾಣದಿಂದ ಬರಗಾಲವನ್ನು ತಪ್ಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರ ಸಭೆಯ ಸದಸ್ಯೆ ಮಹದೇವಿ ಭದ್ರಶೆಟ್ಟಿ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜನಮಾನಸಕ್ಕೆ ಅರಿವನ್ನು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಯೋಜನೆಯ ಕ್ಷೇತ್ರ ಮೇಲ್ವಿಚಾರಕರಾದ ಪ್ರವೀಣ್ ತಿಮ್ಮಣ್ಣವರ ಅವರು ಮಾತನಾಡಿ ಪರಿಸರ ಇದ್ದರೆ ನಾವು ಎನ್ನುವ ಅರಿವು ಪ್ರತಿಯೊಬ್ಬ ನಾಗರಿಕನಿಗೂ ಬೇಕು. ಈ ಅರಿವನ್ನು ಹೊಂದಿದಾಗ ಸಮೃದ್ಧ ಪರಿಸರ ನಿರ್ಮಾಣ ಸಾಧ್ಯ ಎಂದರು.
ವೇದಿಕೆಯಲ್ಲಿ ಪ್ರಗತಿ ಬಂಧು ಸ್ವಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಉಪಸ್ಥಿತರಿದ್ದರು.
ಸ್ವ ಸಹಾಯ ಸಂಘದ ಸದಸ್ಯೆ ನಯನ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸೇವಾ ಪ್ರತಿನಿಧಿ ಮಂಜುಳಾ ವಂದಿಸಿದರು.