ಹಳಿಯಾಳ : ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ ಅವರ ನೇತೃತ್ವದಲ್ಲಿ ಇಂದು ಮಂಗಳವಾರ ಸಂಜೆ ಪಟ್ಟಣದ ವಿವಿಧ ಅಂಗಡಿಗಳಿಗೆ ದಾಳಿ ಮಾಡಲಾಗಿ, ಎರಡು ಅಂಗಡಿಗಳಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡು ತಲಾ ರೂ:2,500/- ರಂತೆ ಒಟ್ಟು ರೂ:5,000/- ದಂಡವನ್ನು ಆಕರಿಸಿ, ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಕೆ ಮಾಡದಂತೆ ಮತ್ತು ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಲಾಯ್ತು.
ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ಜಾಗೃತಿಯನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಪರಿಸರ ಅಭಿಯಂತರರಾದ ದರ್ಶಿತಾ.ಬಿ.ಎಸ್ ಹಾಗೂ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಷೇಧಿತ ಪ್ಲಾಸ್ಟಿಕ್ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಅಶೋಕ್ ಸಾಳೆನ್ನವರ ನೇತೃತ್ವದಲ್ಲಿ ನಿರಂತರ ದಾಳಿ ನಡೆಸಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.