ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಅವಕಾಶ ನೀಡುವಂತೆ ಪ್ರವೀಣ್ ಕೊಠಾರಿ ಆಗ್ರಹ

ದಾಂಡೇಲಿ : ಗೋವಾ ರಾಜ್ಯದ ದೂದ್ ಸಾಗರ್ ಜಲಪಾತವನ್ನು ವೀಕ್ಷಿಸಲೆಂದು ಮೂರು ಸಾವಿರಕ್ಕೂ ಅಧಿಕ ಪ್ರವಾಸಿಗರು ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ ಬಂದಿದ್ದು, ದೂದ್ ಸಾಗರ್ ವೀಕ್ಷಣೆಯನ್ನು ಗೋವಾ ಸರಕಾರ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಪ್ರವಾಸಿಗರು ನಿರಾಶೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ತಮ್ಮ ಊರುಗಳಿಗೆ ಹಿಂದುರುಗಬೇಕಾಯ್ತು. ಇನ್ನೂ ಹೇಗೋ ಹಾಗೋ ಹೋಗಿದ್ದ ಪ್ರವಾಸಿಗರಿಗೆ ಜಲಪಾತಕ್ಕಿಂತ ಮುಂಚೆಯೆ ರೈಲ್ವೆ ಪೊಲೀಸರು ಮತ್ತು ಬಿಎಸ್.ಎಫ್ ಯೋಧರು ಬಸ್ಕಿ ಶಿಕ್ಷೆಯನ್ನು ನೀಡಿ ಬರದಂತೆ ಎಚ್ಚರಿಕೆಯನ್ನು ನೀಡಿದ ಘಟನೆಯೂ ನಡೆದಿತ್ತು.

ಈ ಬಗ್ಗೆ ಕರವೇ (ಪ್ರ) ಬಣದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕೊಠಾರಿಯವರು ಗೋವಾ ಸರಕಾರ ಜಲಪಾತ ವೀಕ್ಷಣೆಯನ್ನು ಸ್ಥಗಿತಗೊಳಿಸಿದ ಕ್ರಮ ಖಂಡನೀಯ. ಈ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು. ಪ್ರವಾಸಿಗರಿಗೆ ನಿಗಧಿತ ಪ್ರವೇಶ ಶುಲ್ಕವನ್ನು ಆಕರಣೆ ಮಾಡಿ ಜಲಪಾತ ವೀಕ್ಷಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಒಂದುವೇಳೆ ಅವಕಾಶ ನೀಡದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.