ಕಾರವಾರ: ಕರ್ನಾಟಕದ ವಿವಿಧ ಭಾಗದಿಂದ ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ ನೂರಾರು ಯುವಕರಿಗೆ ಗೋವಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತಡೆದು ನಿಲ್ಲಿಸಿ ಬಸ್ಕಿ ಹೊಡೆಸಿದ ಘಟನೆ ಇಂದು ನಡೆದಿದೆ.
ಹೆಚ್ಚಿನ ಮಳೆಯಾಗುತ್ತಿದ್ದರಿಂದ ದೂಧ್ ಸಾಗರ್ ಜಲಪಾತ ವೀಕ್ಷಣೆ ಹಾಗೂ ಟ್ರೆಕ್ಕಿಂಗ್ ಮಾಡಲು ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ನೂರಾರು ಯುವಕರು ತೆರಳಿದ್ದರು. ಗೋವಾ ಬಾರ್ಡರ್ ಮೂಲಕ ರೈಲ್ವೇ ಟ್ರ್ಯಾಕ್ ಮೇಲೆ ನಡೆದುಕೊಂಡು ಸಾಗಿದ್ದ ನೂರಾರು ಯುವಕರ ತಂಡವನ್ನು ಗೋವಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಟ್ರಾಕ್ ಮೇಲೆ ಗುಂಪು ಗುಂಪಾಗಿ ಬಂದಿದ್ದರಿಂದ ಲಾಠಿ ಹಿಡಿದು ತಡೆದು ನಿಲ್ಲಿಸಿದ್ದಲ್ಲದೇ, ಬಸ್ಕಿ ಹೊಡೆಸಿ ಮರಳಿ ಕುಳುಹಿಸಿದ್ದಾರೆ. ಹೆಚ್ಚಿನ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೂಧ್ ಸಾಗರ್‍ಗೆ ತೆರಳದಂತೆ ಇಂದಿನಿಂದ ಗೋವಾ ಸರ್ಕಾರ ಬ್ಯಾನ್ ಮಾಡಿದ್ದು, 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೇ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದೆ.