ಕರ್ನಾಟಕದ ಹಲವೆಡೆ ಅಂತರ್ಜಲ ಮಟ್ಟ ಹೆಚ್ಚಳ; ವರದಿ

ಬೆಂಗಳೂರು, ಜುಲೈ 16: ಕೆರೆಗಳು, ಟ್ಯಾಂಕ್‌ಗಳ ಪುನರುಜ್ಜೀವನ ಮತ್ತು ಮುಚ್ಚಿಹೋಗಿರುವ ನೀರಿನ ಕಾಲುವೆಗಳನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳು ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನೆರವಾಗಿದೆ. ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಇತ್ತೀಚಿನ ವರದಿಯ ಪ್ರಕಾರ, 10 ವರ್ಷಗಳ ಅವಧಿಯಲ್ಲಿ ರಾಜ್ಯದ 201 ಸ್ಥಳಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. 2022 ರವರೆಗಿನ ಲೆಕ್ಕಾಚಾರ ಪ್ರಕಾರ 233 ತಾಲ್ಲೂಕುಗಳಲ್ಲಿ 32 ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಉಭಯ ಇಲಾಖೆಗಳು ಆಯ್ದ ತಾಲ್ಲೂಕುಗಳಲ್ಲಿ 10 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ಮೌಲ್ಯಮಾಪನ ಮಾಡಿವೆ. ಕೋಲಾರ, ಚನ್ನಪಟ್ಟಣ ಮತ್ತಿತರ ತಾಲೂಕುಗಳಲ್ಲಿ ಕೆರೆ, ಟ್ಯಾಂಕುಗಳ ಪುನರುಜ್ಜೀವನಗೊಳಿಸಿ ನೀರು ತುಂಬಿಸುವ ಕಾಮಗಾರಿ ಮಾಡಿರುವುದು ಹಾಗೂ ಮುಚ್ಚಿಹೋಗಿರುವ ನಾಲೆಗಳನ್ನು ತೆರವುಗೊಳಿಸಿ ಜಲಾವೃತ ಪ್ರದೇಶಗಳಿಂದ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ ನಂತರ ಅಂತರ್ಜಲ ಮಟ್ಟ ಹೆಚ್ಚಿದೆ ಎಂದು ವರದಿ ಮಾಡಿದೆ.

ರಾಜ್ಯ ಸರಕಾರ, ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಪರಿಸರ ಹೋರಾಟಗಾರರ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ. ಅಂತರ್ಜಲ ಮಟ್ಟವನ್ನು ಕೂಲಂಕಷವಾಗಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 50.12 ಮೀಟರ್‌ಗಳಷ್ಟು ಅಂತರ್ಜಲ ಹೆಚ್ಚಿದೆ ಎಂದು ವರದಿ ಹೇಳಿದೆ. ಅಂತರ್ಜಲ ಕುಸಿತ ಕಂಡಿರುವ ಪೈಕಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಅಗ್ರಸ್ಥಾನದಲ್ಲಿದೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ 7.42 ಮೀಟರ್ ಮಟ್ಟ ಕುಸಿದಿದೆ.

ಅಂತರ್ಜಲ ಮಟ್ಟ ಕುಸಿಯುತ್ತಿರುವ ಪ್ರದೇಶಗಳಲ್ಲಿ ಸಂಪೂರ್ಣ ಅಧ್ಯಯನದ ಅಗತ್ಯವಿದೆ. ರಾಜ್ಯ ಮತ್ತು ಕೇಂದ್ರ ಅಂತರ್ಜಲ ಮಂಡಳಿಗಳು ಅಂತರ್ಜಲ ಮಟ್ಟ ಮತ್ತು ರಾಜ್ಯದ ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟದ ಸಾಮೂಹಿಕ ಅಧ್ಯಯನವನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿರುವುದಾಗಿ ವರದಿ ತಿಳಿಸಿದೆ.