ಹಳಿಯಾಳ ಪಟ್ಟಣದ ಗುಡ್ನಾಪುರ ಕೈಗಾರಿಕಾ ಪ್ರದೇಶದ ಮಂಜುನಾಥ್ ಇಂಡಸ್ಟ್ರೀಸ್’ಗೆ ದಾಳಿ : 400 ಕಿ.ಲೋ ನಿಷೇಧಿತ ಪ್ಲಾಸ್ಟಿಕ್ ಕವರ್ ವಶ

ಹಳಿಯಾಳ : ಪಟ್ಟಣದ ಗುಡ್ನಾಪುರ ಕೈಗಾರಿಕಾ ಪ್ರದೇಶದ ಪ್ಲಾಟ್ ನಂ : 37ರಲ್ಲಿ ಇರುವ ಮಂಜುನಾಥ್ ಇಂಡಸ್ಟ್ರೀಸ್ ಇಲ್ಲಿ ಉತ್ಪಾದಿಸಲಾಗಿದ್ದ 400 ಕಿಲೋ ನಿಷೇಧಿತ ಪ್ಲಾಸ್ಟಿಕ್ ಕವರ್ ಗಳನ್ನು ಹಾಗೂ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್, ಹಳಿಯಾಳ ಪುರಸಭೆಯ ಮುಖ್ಯ ಅಧಿಕಾರಿ ಅಶೋಕ ಸಾಳೆನ್ನವರ್ ಮತ್ತು ಪುರಸಭೆಯ ಪರಿಸರ ಅಭಿಯಂತರರಾದ ದರ್ಶಿತಾ ಬಿ.ಎಸ್. ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ಗುಡ್ನಾಪುರ ಕೈಗಾರಿಕಾ ಪ್ರದೇಶದ ಪ್ಲಾಟ್ ನಂ. 37 ರಲ್ಲಿ ಇರುವ ಸಂಜಯ ಯಲಪ್ಪ ಹಲಗೇಕರ ರವರಿಗೆ ಸೇರಿದ ಮಂಜುನಾಥ ಇಂಡಸ್ಟ್ರೀಸ್ ಗೆ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿ ನಿಷೇಧಿತ ಕಿರಾಣಿ ಕಟ್ಟುವ ಪ್ಲಾಸ್ಟಿಕ್ ಕವರ್‌ಗಳನ್ನು ತಯಾರಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅಲ್ಲಿದ್ದ 400 ಕಿ.ಲೋ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡು ರೂ.10,000/- ದಂಡವನ್ನು ವಿಧಿಸಿ, ಇಂಡಸ್ಟ್ರೀಸ್ ಶೆಡ್‌ನ್ನು ಸೀಜ್ ಮಾಡಿ ಇನ್ನು ಮುಂದೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸದಂತೆ ಎಚ್ಚರಿಕೆ ನೀಡಲಾಗಿದೆ.

ಹಳಿಯಳ ಪುರಸಭೆಯ ಮುಖ್ಯ ಅಧಿಕಾರಿ ಅಶೋಕ್ ಸಾಳೆನ್ನವರ್ ಅವರ ನೇತೃತ್ವದಲ್ಲಿ ಈಗಾಗಲೆ ಪುರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಹಾಗೂ ನಿರಂತರ ದಾಳಿಯನ್ನು ನಡೆಸಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.