ಗಡ್ಕರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಥ್ರೆಟ್ ಹಿಂದಿದ್ಯಾ ಲಷ್ಕರ್ ಉಗ್ರನ ಪ್ರಚೋದನೆ?

ಬೆಳಗಾವಿ: ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗಡ್ಕರಿ ಅವರಿಗೆ ಬೆದರಿಕೆ ಒಡ್ಡಿರುವ ಹಿಂದೆ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರನ ಪ್ರಚೋದನೆ ಇರುವ ಸಂಶಯ ಮೂಡಿದೆ.

ಲಷ್ಕರ್-ಇ-ತೋಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಎಂಬವನನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ. ಎನ್‌ಐಎ ಅಧಿಕಾರಿಗಳು ಅಫ್ಸರ್ ಪಾಷಾನನ್ನು ಹಿಂಡಲಗಾ ಜೈಲಿನಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಶನಿವಾರ ಇಡೀ ದಿನ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ ಅಫ್ಸರ್ ಪಾಷಾನನ್ನು ಹಸ್ತಾಂತರಿಸಲಾಗಿದೆ.

ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಸಂಘಟನೆ ಜೊತೆಗೆ ನಂಟು ಆರೋಪದಡಿ ಅಫ್ಸರ್ ಪಾಷಾ ಬಂಧಿತನಾಗಿದ್ದ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ ಶಿಕ್ಷೆ ಅನುಭವಿಸುತ್ತಿದ್ದ. ಇದೇ ವೇಳೆ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿಯಿಂದ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ಹಣಕ್ಕಾಗಿ ಆತ ಈ ಕೃತ್ಯ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

ನಾಗ್ಪುರ ಪೊಲೀಸರ ವಿಚಾರಣೆ ವೇಳೆ ಜಯೇಶ್ ಪೂಜಾರಿ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕುವಂತೆ ಅಫ್ಸರ್ ಪಾಷಾ ಪ್ರಚೋದನೆ ನೀಡಿದ್ದ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಜಯೇಶ್ ಪೂಜಾರಿ ನೀಡಿದ ಮಾಹಿತಿ ಆಧರಿಸಿ ಅಫ್ಸರ್ ಪಾಷಾನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.