ವೇಣುಗೋಪಾಲ್‌ ಸಾವು ಯುವ ಬ್ರಿಗೇಡ್‌ಗೆ ದೊಡ್ಡ ನಷ್ಟ: ಶೋಭಾ ಕರಂದ್ಲಾಜೆ

ಟಿ. ನರಸೀಪುರ (ಜು.15): ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಸಾವು ಕುಟುಂಬಕ್ಕೆ ನಷ್ಟಅಲ್ಲ, ನಮ್ಮ ಸಂಘಟನೆಗೆ ಯುವ ಬ್ರಿಗೇಡ್‌ಗೆ ಈ ಭಾಗದ ನಮ್ಮ ವ್ಯವಸ್ಥೆಗೆ ಆದ ಒಂದು ದೊಡ್ಡ ನಷ್ಟಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಇತ್ತೀಚೆಗೆ ಹತ್ಯೆಗೀಡಾದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಮನೆಗೆ ಭೇಟಿ ನೀಡಿ ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

31 ವರ್ಷದ ಒಬ್ಬ ಯುವಕನನ್ನ ಅಷ್ಟೊಂದು ಬಾರಿ ಚುಚ್ಚಿ ಕೊಂದಿರುವುದು ತುಂಬಾ ದುಃಖದ ಸಂಗತಿ. ಯಾರು ಕೊಲೆಗಡಕರಿದ್ದಾರೆ ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇಲ್ಲಿ ಶಾಸಕರು, ಮಂತ್ರಿಗಳ ಮಗನ ಜೊತೆ ಓಡಾಡಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ವೇಣುಗೋಪಾಲ್‌ ಅವರನ್ನು ಚುಚ್ಚಿ ಕೊಂದಿದ್ದಾರೆ, ಈ ಬಗ್ಗೆ ತನಿಖೆ ನಡೆಸಿ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಲವಾರು ಜನ ಕೊಲೆ ಮಾಡಿರಬಹುದು, ಕೊಲೆಗಡಕರು ಜೈಲಲ್ಲೂ ಇರಬಹುದು.

ಆದರೆ ಜೈನ ಮುನಿಯವರ ಶರೀರವನ್ನು ತುಂಡು ತುಂಡು ಮಾಡಿ ಬೋರ್ವೆಲ್‌ ಒಳಗೆ ತುಂಬಿರುವುದನ್ನು ನಾವೆಂದು ಕಂಡಿರಲಿಲ್ಲ, ಮೊದಲ ಬಾರಿಗೆ ಕರ್ನಾಟಕದಲ್ಲಿ ಆಗಿದೆ. ಈ ಘಟನೆಯಿಂದ ನಮಗೆ ಆತಂಕವಾಗಿದೆ, ಇಡೀ ಕುಟುಂಬಕ್ಕೆ ಆಶ್ರಯ ಆಗಿದ್ದ ಗಂಡು ಮಗ ಇಲ್ಲ, ಆ ಮಗುವಿನ ಪದವಿ ವಿದ್ಯಾಭ್ಯಾಸವನ್ನು ನಮ್ಮ ಸಂಘಟನೆಯಿಂದಲೇ ಕೊಡುವ ಭರವಸೆ ಇದೆ ಎಂದರು. ಕೊಲ್ಲುವ ರಾಜಕೀಯ ಮಾಡುತ್ತಿರುವವರು ಕಾಂಗ್ರೆಸ್‌ ಅವರು, ಗೆದ್ದ ದರ್ಪದಲ್ಲಿ ಅಹಂಕಾರದಲ್ಲಿ ನಾವು 135 ಸೀಟು ಗೆದ್ದಿದ್ದೇವೆ, ನಮ್ಮನ್ನು ಏನು ಮಾಡೋಕೆ ಆಗುವುದಿಲ್ಲ ಎಂದು ದರ್ಪದಲ್ಲಿ ಈ ಆಟ ಆಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಯಾಕೆ ಬೆಳಗಾವಿಯಲ್ಲಿ ಹಾಗಾಯಿತು, ಬೆಂಗಳೂರಿನಲ್ಲಿ ಹಾಡುಹಗಲೆ ಉದ್ಯಮಿಗಳ ಕೊಲೆಯಾಯಿತು, ನಿನ್ನೆ ದಕ್ಷಿಣ ಕನ್ನಡದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಿನಲ್ಲಿ ತೇಲುತ್ತಿದೆ, ಯಾರು ದೇಶದ್ರೋಹಿ ಶತ್ರುಗಳಿದ್ದಾರೆ, ಅವರಿಗೆ ಭಯವಿಲ್ಲ. ಏಕೆಂದರೆ ನಮ್ಮನ್ನು ರಕ್ಷಣೆ ಮಾಡುವ ಸರ್ಕಾರ ಬಂದಿದೆ ಎಂದು ಅವರಿಗೆ ಅನಿಸಿದೆ ಕಾಂಗ್ರೆಸ್‌ ಇಲ್ಲಿರುವ ಆರೋಪಿ ನಂಬರ್‌ ನಾಲ್ಕನ್ನು, ಆರೋಪಿ ನಂಬರ್‌ ಒಂದು ಮಾಡುತ್ತಿದೆ ಎಂದು ಅವರು ಆರೋಪಿಸಿದರು. ನಾನು ಸಚಿವ ಮಹದೇವಪ್ಪ ಅವರನ್ನು ಕೇಳುತ್ತೇನೆ, ವೇಣುಗೋಪಾಲ್‌ ಅವರು ಮಾಡಿದ ತಪ್ಪೇನು, ನಿಮ್ಮ ಮಗನಿಗೆ ಅಥವಾ ನಿಮಗೇನಾದರೂ ಮಾಡಿದ್ದರಾ, ಇದು ಕಾಂಗ್ರೆಸ್‌ನ ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್‌ ನಾಯಕರ ಜೊತೆಗಿದ್ದ ಹುಡುಗರು ಕೊಲೆ ಮಾಡಿದ್ದಾರೆ: ಟಿ. ನರಸೀಪುರದಲ್ಲಿ ಹತ್ಯೆಯಾದ ನಮ್ಮ ಹಡುಗನನ್ನು ಕಾಂಗ್ರೆಸ್‌ ನಾಯಕರ ಜೊತೆಯಲ್ಲಿರುವವರು ಸಂಧಾನಕ್ಕೆ ಕರೆದು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯುವಕ ಹನುಮ ಜಯಂತಿ ಆಚರಿಸಿದ್ದ. ಕೇಸರಿ ಧ್ವಜ ಏರಿಸಿ ಹಿಂದುತ್ವದ ಕೆಲಸ ಮಾಡಿದ್ದ. ಆತನ ಹತ್ಯೆಯಾದ ಬಳಿಕ ಮೂವರು ಮಹಿಳೆಯರು ಮಾತ್ರ ಆ ಕುಟುಂಬದಲ್ಲಿ ಉಳಿದಿದ್ದಾರೆ. ಆತನ ತಾಯಿ, ಹೆಂಡತಿ, ಮಗಳು ಮಾತ್ರ ಉಳಿದಿದ್ದಾರೆ. ಅವರಿಗೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದರು.

ಇದರಿಂದ ಅವರಿಗೆ ಏನು ಲಾಭ ಸಿಕ್ಕಿತು? ಅವರಿಗೆ ಏನು ಒಳ್ಳೆಯದಾಯಿತು? ಆ ಕುಟುಂಬಕ್ಕೆ ಇನ್ಯಾರು ಧಿಕ್ಕು? ಶಾಸಕರು, ಮಂತ್ರಿಗಳು, ನಾಯಕರು ಬರುತ್ತಾರೆ. ಆದರೆ ಆ ತಾಯಿಯ, ಹೆಂಡತಿಯ, ಮಗಳ ದುಃಖ ಕೇಳೋರು ಯಾರು? ಕೊಲೆ ಮಾಡುವುದು ಒಂದು ನಿಮಿಷದ ಕೆಲಸ. ನಾವೆಲ್ಲರೂ ಒಂದು ವಿಚಾರದ ಪರವಾಗಿ ಕೆಲಸ ಮಾಡುತ್ತೇವೆ. ಆದರೆ ಒಂದು ವಿಚಾರವಾಗಿ ಕೆಲಸ ಮಾಡದಂತೆ ರಾಜ್ಯದಾದ್ಯಂತ ಭಯ ಹುಟ್ಟಿಸಬೇಕೆಂಬ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು.