ಗ್ರಾಮಸಭೆಗೆ ಅಧಿಕಾರಿಗಳು ಗೈರಾದರೆ ಧರಣಿ ಕೂರುತ್ತೇವೆ ಸದಸ್ಯರಿಂದ ಎಚ್ಚರಿಕೆ.!

ಕುಮಟಾ: ಗ್ರಾಮ ಸಭೆಗೆ ಅಧಿಕಾರಿಗಳು ಗೈರಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದೆ. ಮುಂದಿನ ಗ್ರಾಮ ಸಭೆಗೆ ಅಧಿಕಾರಿಗಳು ಗೈರಾದರೆ ತಾ.ಪಂ ಕಚೇರಿ ಎದುರು ಸರ್ವ ಸದಸ್ಯರು ಧರಣಿ ನಡೆಸುತ್ತೇವೆ ಎಂದು ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ ಎಚ್ಚರಿಸಿದರು.

ಅವರು ತಾಲೂಕಿನ ಮೂರೂರು ಗ್ರಾ.ಪಂ ಕಚೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಕಳೆದ ವರ್ಷ ಆ.30 ರಂದು ಗ್ರಾಮ ಸಭೆ ಆಯೋಜಿಸಲಾಗಿತ್ತು. ಆ ಸಭೆಗೂ ಅಧಿಕಾರಿಗಳು ಗೈರಾದ ಕಾರಣ ಗ್ರಾಮ ಸಭೆ ಮುಂದೂಡಲಾಗಿತ್ತು. ಈ ವರ್ಷ ಜುಲೈ 26 ರಂದು ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ, ಸಮಾಜ ಕಲ್ಯಾಣ, ಕಂದಾಯ ಮತ್ತು ಪೊಲೀಸ್ ಇಲಾಖೆ ಹೊರತುಪಡಿಸಿ, ಇನ್ನುಳಿದ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ಇದಕ್ಕೆ ಗ್ರಾಮ ಸಭೆ ಮುಂದೂಡಿದ್ದೇವೆ. ಮುಂದಿನ ಗ್ರಾಮ ಸಭೆಗೂ ಅಧಿಕಾರಿಗಳು ಗೈರಾದರೆ ತಾ.ಪಂ ಕಚೇರಿ ಎದುರು 12 ಸದಸ್ಯರು ಸೇರಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭಾರತಿ ನಾಯ್ಕ, ಸದಸ್ಯರಾದ ರಾಮಚಂದ್ರ ಹೆಗಡೆ, ಹರ್ಷ ಹೆಗಡೆ, ಕೃಷ್ಣ ಗೌಡ ಸೇರಿದಂತೆ ಅನೇಕರು ಹಾಜರಿದ್ದರು.