ಅಂಕೋಲಾ: ದೇಶದ ಮಹತ್ವಕಾಂಕ್ಷೆಯ ಚಂದ್ರಯಾನ -3 ಶುಕ್ರವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಹಿನ್ನೆಲೆ ದೇಶದ ವಿಜ್ಞಾನಿಗಳ ಸಾಧನೆಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಶ್ಲಾಘನೆ ವ್ಯಕ್ತಪಡಿಸಿ ಇದು ಭಾರತದ ಪಾಲಿಗೆ ಈ ದಿನ ಸುವರ್ಣಗಳಿಗೆಯಾಗಲಿದೆ. ಇದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಚಂದ್ರಯಾನ -3 ಸಂಪೂರ್ಣ ಯಶಸ್ಸು ದೊರೆತಲ್ಲಿ ಈ ಸಾಧನೆ ಮಾಡಿದ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಾಣಿಸಿಕೊಳ್ಳಲಿದೆ. ಭಾರತೀಯ ವಿಜ್ಞಾನಿಗಳು ಜಗತ್ತಿನಲ್ಲಿಯೇ ಶ್ರೇಷ್ಠ ವಿಜ್ಞಾನಿಗಳು, ಉತ್ಕೃಷ್ಟ ಜ್ಞಾನಿಗಳು ಎಂದು ಹೆಸರಾಗಿದ್ದಾರೆ. ಚಂದ್ರಯಾನ -2 ರ ಕಹಿ ನೆನಪು ಮರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ವಿಪುಲ ಅವಕಾಶಗಳನ್ನು ಒದಗಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ವಿಜ್ಞಾನಿಗಳಿಗೆ ಬೆನ್ನೆಲುಬಾಗಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳ ಮತ್ತು ಚಂದ್ರನ ಅಂಗಳಕ್ಕೆ ಲಗ್ಗೆ ಇಡುವವರು ಭಾರತೀಯರು ಎನ್ನುವುದು ಜಗತ್ತಿಗೆ ದಿಗ್ಭ್ರಮೆ ಮೂಡಿಸುತ್ತದೆ ಎಂದರು.
ಭಾರತೀಯ ಮಹಿಳೆಯರು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಉಳಿದ ಮಹಿಳಾ ವಿಜ್ಞಾನಿಗಳಿಗಿಂತ ಮುಂದಿದ್ದಾರೆ. ಚಂದ್ರಯಾನ -3 ಕಾರ್ಯಾಚರಣೆಯ ಪ್ರಮುಖ ರೂವಾರಿ ಮಹಿಳೆಯಾಗಿರುವುದು ವಿಶೇಷವಾಗಿದ್ದು, ಇನ್ನುಳಿದ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡಲು ಸೀಮಿತವಾದಂತಿದ್ದ ಮಹಿಳೆಯರು ಇಂದು ಚಂದ್ರನ ಅಂಗಳಕ್ಕೆ ರಾಕೆಟ್ ಉಡಾವಣೆ ಮಾಡುವಷ್ಟು ಪ್ರಬಲರಾಗಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಶುಕ್ರವಾರ ಮಧ್ಯಾಹ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಮಧಾಹ್ನ 2.35ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು. ಇದು ವಿಕ್ರಮ್ ಹೆಸರಿನ ಲ್ಯಾಂಡರ್, ಪ್ರಜ್ಞಾನ ಹೆಸರಿನ ರೋವರನ್ನು ಹೊತ್ತು ಆಕಾಶಕ್ಕೆ ಚಿಮ್ಮಿತು. ಚಂದ್ರನಲ್ಲಿ ಸುರಕ್ಷಿತವಾಗಿ ಲ್ಯಾಂಡರ್ ಇಳಿಸಿದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇಶದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.