ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!

ಹಾಸನ (ಜು.14): ಹಾಸನ ಜಿಲ್ಲೆಯಲ್ಲಿ ಅರಣ್ಯದಿಂದ ಆಹಾರವನ್ನು ಅರಸಿ ಬಾಗಿವಾಳು ಗ್ರಾಮದ ಹೊರವಲಯದಲ್ಲಿ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಅದನ್ನು ಹಂದಿಮರಿ ರೀತಿಯಲ್ಲಿ ಬೈಕ್‌ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಳಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಬರುವ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಚಿರತೆ ನಾಡಿಗೆ ನುಗ್ಗುವ ಪ್ರಮಾಣ ತುಸು ಹೆಚ್ಚೇ ಎಂದು ಹೇಳಬಹುದು. ಅದೇ ರೀತಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದೆ. ತನ್ನ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಧೈರ್ಯ ಮಾಡಿದ ಯುವಕ ಚಿರತೆಯನ್ನು ಓಡಿಸಲು ಮುಂದಾಗಿದ್ದಾನೆ.

ಹಗ್ಗದ ಸಹಾಯದಿಂದ ಚಿರತೆಯನ್ನೇ ಕಟ್ಟಿದ: ಇನ್ನು ಚಿರತೆ ಓಡಿಸಲು ಮುಂದಾದಾಗ ಮತ್ತಷ್ಟು ಭೀಕರವಾಗಿ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಕೈ ಮತ್ತು ಕಾಲುಗಳಿಗೆ ಗಾಯವಾಗಿದ್ದರೂ, ಚಿರತೆಯೊಂದಿಗೆ ಸೆಣಸಾಡಿದ್ದಾನೆ. ದೇಹದ ಭಾಗಗಳಿಗೆ ಗಾಯವಾದರೂ  ಧೃತಿಗೆಡದ ಯುವಕ ಜಮೀನಿಗೆ ಕೊಂಡೊಯ್ಯುತ್ತಿದ್ದ ಬೈಕ್‌ನಲ್ಲಿರುವ ಹಗ್ಗವನ್ನು ಎತ್ತಿಕೊಂಡು ಚಿರತೆ ದಾಳಿ ಮಾಡಲು ಮುಂದಾದಾಗ ಅದಕ್ಕೆ ಕುಣಿಕೆ ಹಾಕಿ ಬಿಗಿದಿದ್ದಾನೆ. ಈ ವೇಳೆ ಚಿರತೆಯ ಕಾಲುಗಳು ಹಾಗೂ ದೇಹಕ್ಕೆ ಹಗ್ಗ ಬಿಗಿದು ದಾಳಿ ಮಾಡಲು ಸಾಧ್ಯವಾಗದ ರೀತಿ ಬಿದ್ದಿದೆ.

ಚಿರತೆಯನ್ನು ಗ್ರಾಮಕ್ಕೆ ಹೊತ್ತುಕೊಂಡು ಬಂದ ಯುವಕ: ನಂತರ, ದೇಹದ ಭಾಗಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ನಾಲ್ಕು ಕಾಲುಗಳಿಗೆ ಕಟ್ಟಿದ್ದಾನೆ. ನಂತರ, ಕೋಲುಗಳ ಸಹಾಯದಿಂದ ಬೈಕ್‌ನ ಹಿಂಭಾಗದಲ್ಲಿ ಹಂದಿಮರಿಯ ರೀತಿಯಲ್ಲಿ ಕಟ್ಟಿಕೊಂಡು ಸೀದಾ ಗ್ರಾಮಕ್ಕೆ ಹೋಗಿದ್ದಾನೆ. ಇನ್ನು ಚಿರತೆಯೊಂದಿಗೆ ಏಕಾಂಗಿಯಾಗಿ ಹೋರಾಡಿ ಸೆರೆಹಿಡಿದ ಯುವಕನನ್ನು ಬಾಗಿವಾಳು ಗ್ರಾಮದ ವೇಣುಗೋಪಾಲ್ ಅಲಿಯಾಸ್‌ ಮುತ್ತು ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರೆಲ್ಲರೂ ಸೇರಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಚಿರತೆಯನ್ನು ಹಸ್ತಾಂತರ ಮಾಡಿದ್ದಾರೆ.