ಹಳಿಯಾಳ : ಹಳಿಯಾಳ ಮತ್ತು ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಬಿಸಿಎ ಕೋರ್ಸ್ ಪ್ರಾರಂಭಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವಾಲಯವು ಈಗಾಗಲೇ ಆದೇಶವನ್ನು ನೀಡಿದೆ ಎಂದು ಶಾಸಕರಾದ ಆರ್ ವಿ ದೇಶಪಾಂಡೆ ಅವರು ಹೇಳಿದರು.
ಅವರು ಇಂದು ಶುಕ್ರವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಹಳಿಯಾಳ ಮತ್ತು ದಾಂಡೇಲಿ ಭಾಗದ ವಿದ್ಯಾರ್ಥಿಗಳು ಬಿ.ಸಿ.ಎ. ಕೋರ್ಸನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪೇಕ್ಷಿಸುತ್ತಿದ್ದು, ಬಿ.ಸಿ.ಎ. ಕೋರ್ಸ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ದೂರದ ಧಾರವಾಡ ಹಾಗೂ ಇತರ ಪಟ್ಟಣಗಳಿಗೆ ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವುದರಿಂದ ಪ್ರಸ್ತುತ ವರ್ಷದಿಂದ ಬಿಸಿಎ ಕೋರ್ಸ್’ಗಳನ್ನು ಪ್ರಾರಂಭಿಸಬೇಕೆಂದು ವಿದ್ಯಾರ್ಥಿಗಳ ಹಾಗೂ ಪೋಷಕರ ಒತ್ತಾಸೆಯಾಗಿತ್ತು.
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಿಂದಲೇ ಅನ್ವಯವಾಗುವಂತೆ ಬಿ.ಸಿ.ಎ. ಕೋರ್ಸ್ ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ವಿನಂತಿಸಿಕೊoಡಿದ್ದೇನು. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಹಳಿಯಾಳ ಮತ್ತು ದಾಂಡೇಲಿ ಪ್ರಥಮ ದರ್ಜೆ ಕಾಲೇಜಿಗೆ ನೂತನವಾಗಿ ಬಿ.ಸಿ.ಎಸ್. ಕೋರ್ಸನ್ನು ಪ್ರಾರಂಭಿಸಲು ಮೌಖಿಕವಾಗಿ ಒಪ್ಪಿಗೆಯನ್ನು ನೀಡಿದ್ದಾರೆ. ಹಳಿಯಾಳಕ್ಕೆ 60 ಮತ್ತು ದಾಂಡೇಲಿಗೆ 40 ಸೀಟುಗಳನ್ನು ಪಡೆಯಲು ಒಪ್ಪಿಗೆ ನೀಡಿ ಮಂಜೂರಾತಿಯನ್ನು ನೀಡಿದ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳ ಪರವಾಗಿ ಆರ್.ವಿ.ದೇಶಪಾಂಡೆಯವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.