ಹಳಿಯಾಳದಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ : ದೂರು ದಾಖಲು

ಹಳಿಯಾಳ : ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಮತ್ತು ಹಿರಿಯ ವಕೀಲರಾಗಿರುವ ಮಲ್ಲಿಕಾರ್ಜುನ.ವಿ. ಅಷ್ಟೇಕರ ಅವರ ಮೇಲೆ ಕಕ್ಷಿದಾರರೊರ್ವರು ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಳಿಯಾಳ ಪಟ್ಟಣದ ಮೇದಾರಗಲ್ಲಿಯ ನಿವಾಸಿ ಹಾಗೂ ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ.ವಿ.ಅಷ್ಟೇಕರ ಅವರು ನ್ಯಾಯಾಲಯದಿಂದ ಮನೆಗೆ ಬಂದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ 35 ವರ್ಷ ವಯಸ್ಸಿನ ಹಳಿಯಾಳ ಪಟ್ಟಣದ ಆಶ್ರಯ ನಗರದ ನಿವಾಸಿ ಮಹ್ಮಮದ್ ಇಸ್ಮಾಯಿಲ್ ಅಬ್ದುಲ್‌ ಕರಿಂ ಶೇಖ ಎಂಬಾತನು ಏಕಾಏಕಿ
ವಕೀಲ ಅಷ್ಟೇಕರ ಮನೆಗೆ ನುಗ್ಗಿ ಅವರಿಗೆ ಅವಾಚ್ಯ ಶಬ್ಬಗಳಿಂದ ನಿಂದಿಸಿ, ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ತಲೆಗೆ ಗಾಯವಾಗಿದೆ. ಘಟನೆ ನಡೆದ ತಕ್ಷಣ ಗಾಯಗೊಂಡ ವಕೀಲ ಅಷ್ಟೇಕರ್ ಅವರನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬಳಿಕ ಹಳಿಯಾಳ ವಕೀಲರು ಅಷ್ಟೇಕರ ಅವರನ್ನು ಪೊಲೀಸ್ ಠಾಣೆಗೆ ಕರೆ ತಂದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಳಿಯಾಳದ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.