ಬೆಂಗಳೂರು, ಜು.14: ಅಪ್ರಾಪ್ತ ಬಾಲಕಿಯೊಬ್ಬಳು ತನ್ನನ್ನು ಬೇರೆಯವರಿಗೆ ಬಲವಂತವಾಗಿ ಮದ್ವೆ ಮಾಡಿಸಿದ ಆರೋಪದ ಮೇಲೆ ತನ್ನ ತಂದೆಯ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ತೆಲಂಗಾಣದ ಹೈದರಾಬಾದ್ ನಿವಾಸಿಯಾದ ಸಂತ್ರಸ್ತೆ ದೂರಿನ ಪ್ರಕಾರ ‘ಬೆಂಗಳೂರಿನ ನಿವಾಸಿಯಾದ ಶಿವಶರಣಪ್ಪ ಅವರನ್ನು ಮದುವೆಯಾಗುವಂತೆ ಆಕೆಯ ತಂದೆ ಒತ್ತಾಯಿಸಿದ್ದಾರೆ. ಆದರೆ, ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಈ ಮದುವೆಯನ್ನ ತಿರಸ್ಕರಿಸಿದ್ದಳು. ಆದರೂ ಒತ್ತಾಯ ಪೂರ್ವಕವಾಗಿ 16 ವರ್ಷದ ಬಾಲಕಿಗೆ ಮದುವೆ ಮಾಡಿಸಿದ ತಂದೆ ಮತ್ತು ವರನ ಮೇಲೆ ಸ್ವತಃ ಮಗಳೇ ದೂರು ದಾಖಲಿಸಿದ್ದಾಳೆ.
ಜೂನ್ 13 ರಂದು ಆಕೆಯ ತಂದೆ ಶ್ರೀನು ಕಲಬುರಗಿ ಜಿಲ್ಲೆಯ ಗ್ರಾಮದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಾಲಕಿಯನ್ನು ಕರೆತಂದನು. ಅದೇ ದಿನ ಶಿವಶರಣಪ್ಪ ಕೂಡ ಗ್ರಾಮಕ್ಕೆ ಆಗಮಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೂನ್ 14 ರಂದು ಬಾಲಕಿಯನ್ನು ಆಕೆಯ ತಂದೆ ಶ್ರೀನು ಸಹಾಯದೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಕರೆದೊಯ್ದು, ಅಲ್ಲಿ ಶಿವಶರಣಪ್ಪ ಎಂಬಾತನ ಜೊತೆಗೆ ಮದುವೆಯಾಗುವಂತೆ ಒತ್ತಾಯಿಸಲಾಗಿದೆ. ಶಿವಶರಣಪ್ಪ ಅಪ್ರಾಪ್ತ ವಯಸ್ಕಳೆಂದು ತಿಳಿದಿದ್ದರೂ ಮದುವೆಯಾಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಬಳಿಕ ಜೂನ್ 15 ರಂದು ಅಪ್ರಾಪ್ತ ಬಾಲಕಿ ಮತ್ತು ಶಿವಶರಣಪ್ಪ ಬೆಂಗಳೂರಿಗೆ ಆಗಮಿಸಿ, ಬೆಳ್ಳಂದೂರಿನ ಮನೆಯೊಂದರಲ್ಲಿ ಬೀಗ ಹಾಕಿ, ದೈಹಿಕ ಸಂಬಂಧ ಹೊಂದಲು ಯತ್ನಿಸಿದ್ದನಂತೆ. ನಂತರ ಇದಕ್ಕೆ ಆಕೆ ವಿರೋಧಿಸಿದಾಗ ನಿಲ್ಲಿಸಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಆರೋಪಿಸಿದ್ದಾಳೆ. ಜುಲೈ 12 ರಂದು, ಹುಡುಗಿ ಪೊಲೀಸ್ ಕಂಟ್ರೋಲ್ ರೂಂಗೆ ಡಯಲ್ ಮಾಡಿ, ತನ್ನ ಸಮಸ್ಯೆಯನ್ನ ಹೇಳಿಕೊಂಡಿದ್ದಾಳೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದು, ಬಾಲಕಿಯಿ ದೂರು ದಾಖಲಿಸಿದ್ದಾಳೆ.
ಅಪ್ರಾಪ್ತರ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿವಶರಣಪ್ಪ ಮತ್ತು ತಂದೆ ಶ್ರೀನು ಅವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಲಂ 12 ಮತ್ತು 9 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಯಿದೆ, ಸೆಕ್ಷನ್ 12 (ಲೈಂಗಿಕ ಕಿರುಕುಳ), ಪೋಕ್ಸೊ (ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ) ಕಾಯಿದೆ ಮತ್ತು ಸೆಕ್ಷನ್ 34 ಮತ್ತು 344 ರನ್ವಯ ಶಿವಶರಣಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಬಾಲಕಿಯ ತಂದೆ ಶ್ರೀನು ಅವರನ್ನು ಪತ್ತೆ ಹಚ್ಚಲು ಪೊಲೀಸರು ಶುರು ಮಾಡಿದ್ದಾರೆ.