ತಮಿಳುನಾಡಿನಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ

ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಮಾಡುವ ಘಟನೆಗಳು ಹೆಚ್ಚಾಗಿದೆ, ಈ ರೈಲು ಶುರುವಾಗಿನಿಂದ ಅನೇಕ ಕಡೆ ಕಲ್ಲು ತೂರಾಟ ನಡೆಯುತ್ತಲೇ ಇದೆ. ನಮ್ಮ ಆಸ್ತಿಗೆ ನಾವೇ ಹಾನಿ ಮಾಡುವುದು ಸರಿಯಲ್ಲ. ಆ ಮನಸ್ಥಿತಿಯ ಜನರನ್ನು ಮೊದಲು ಮಟ್ಟ ಹಾಕಬೇಕು ಎಂದು ಪ್ರಯಾಣಿಕರೊಬ್ಬರು ಹೇಳಿರುವ ವೀಡಿಯೊ ಎಲ್ಲ ಕಡೆ ಸದ್ದು ಮಾಡಿತ್ತು. ಇದೀಗ ಮತ್ತೊಂದು ಘಟನೆ ಇಂದು (ಜುಲೈ.14) ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಪಕ್ಕದಲ್ಲಿರುವ ಬೇಸಿನ್ ಬ್ರಿಡ್ಜ್ ನಿಲ್ದಾಣದ ಬಳಿ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದರಿಂದ ರೈಲಿನ ಎರಡು ಗಾಜುಗಳು ಪುಡಿ ಪುಡಿಯಾಗಿದೆ. ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಚೆನ್ನೈಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

2023 ಫೆಬ್ರವರಿಯಲ್ಲಿ ಬೆಂಗಳೂರಿನ ಕಂಟೋನ್ಮೆಂಟ್ ಸ್ಟೇಷನ್ ಬಳಿ ವಂದೇ ಭಾರತ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಇದು ಕರ್ನಾಟಕದಲ್ಲಿ ನಡೆದ ಮೊದಲ ಕಲ್ಲು ತೂರಾಟ. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್​​ನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದರು. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಎಂಬ ಪ್ರಶಂಸೆಯನ್ನು ಪಡೆದಿತ್ತು.