ದಾಂಡೇಲಿ : ಅವರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕರಾಟೆ ವೀರ. ವಿದ್ಯಾರ್ಥಿ ದೆಸೆಯಲ್ಲೆ ಕರಾಟೆ ಪಟುವಾಗಿ ಗಮನ ಸೆಳೆದವರು. ಓದು ಮುಗಿದ ಬಳಿಕ ಸರಕಾರಿ ಕೆಲಸಕ್ಕೆ ಸೇರಿದ ಇವರು ವೃತ್ತಿ ಬದುಕಿನ ಜೊತೆ ಜೊತೆಗೆ ಕರಾಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ವೃತ್ತಿಯಲ್ಲಿ ಪದೋನ್ನತಿಗೊಂಡು ಇದೀಗ ಯಲ್ಲಾಪುರ ಪಟ್ಟಣ ಪಂಚಾಯ್ತಿಗೆ ಮುಖ್ಯಾಧಿಕಾರಿಯಾಗಿ ನಿಯೋಜಿತರಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಸುನೀಲ್ ಗಾವಡೆಯವರು ಕರಾಟೆ ಗುರುಗಳಾಗಿ ದಾಂಡೇಲಿಯಲ್ಲಿ ಚಿರಪರಿಚಿತರು. ಸಾಕಷ್ಟು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿರುವ ಸುನೀಲ್ ಗಾವಡೆಯವರು ದಾಂಡೇಲಿ ನಗರ ಸಭೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಹತ್ತು ವರ್ಷಗಳವರೆಗೆ ಸೇವೆ ಸಲ್ಲಿಸಿ ಹೊನ್ನಾವರ ಪಟ್ಟಣ ಪಂಚಾಯ್ತಿಗೆ ಅದೇ ಹುದ್ದೆಗೆ ವರ್ಗಾವಣೆಗೊಂಡು ಅಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಭಡ್ತಿಗೊಂಡು ಶಿರಸಿಗೆ ವರ್ಗಾವಣೆಗೊಂಡಿದ್ದರು.
ಶಿರಸಿ ನಗರ ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆಯಲ್ಲಿದ್ದ ಸುನೀಲ್ ಗಾವಡೆಯವರನ್ನು ಸೇವಾ ಹಿರಿತನದಡಿ ಪದೋನ್ನತಿಗೊಳಿಸಿ, ಯಲ್ಲಾಪುರ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಲಾಗಿತ್ತು. ಕರಾಟೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಪಡೆದ ಹೆಗ್ಗಳಿಕೆಯನ್ನು ಹೊಂದಿರುವ ಸುನೀಲ ಗಾವಡೆಯವರು ಕವಿಯಾಗಿ, ಗಾಯಕರಾಗಿಯೂ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಯಲ್ಲಾಪುರ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯಾಗಿ ಪದೋನ್ನತಿಗೊಂಡ ಸುನೀಲ್ ಗಾವಡೆಯವರನ್ನು ಜೋಯಿಡಾ ತಾಲ್ಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ.