ಜೋಯಿಡಾ : ಅರಣ್ಯ ಇಲಾಖೆಯ ಆಶ್ರಯದಡಿ ಜೋಯಿಡಾ ತಾಲ್ಲೂಕಿನ ಯರಮುಖದಲ್ಲಿ ವನಮಹೋತ್ಸವ ಮತ್ತು ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಗುಂದ ವಲಯಾರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ಅವರು ಗಿಡ ನೆಡುವುದು ಮಾತ್ರ ವನಮಹೋತ್ಸವ ಅಲ್ಲ, ನೆಟ್ಟ ಗಿಡವನ್ನು ಸಂರಕ್ಷಿಸಿ ಬೆಳೆಸಿದಾಗ ಮಾತ್ರ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಲು ಸಾಧ್ಯ. ಮರ ಗಿಡಗಳನ್ನು ದೇವರಂತೆ ಪೂಜಿಸುವ, ಆರಾಧಿಸುವ ದೇಶ ನಮ್ಮದು. ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಪರಿಸರ ಸಂರಕ್ಷಣೆಯ ನಿಜವಾದ ಸೇನಾನಿಗಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯರಮುಖ ಸರಕಾರಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಕನ್ಯಾ ದೇಸಾಯಿ ಅವರು ಜೀವಿಗಳು ಬದುಕಬೇಕಾದರೆ ಆಮ್ಲಜನಕ ಬೇಕು, ಜಗತ್ತಿನಲ್ಲಿ ಆಮ್ಲಜನಕದ ಕೊರತೆಯಾಗದಿರಲು ಅರಣ್ಯ ಬೇಕು. ಅರಣ್ಯ ಸಂರಕ್ಷಣೆ ಯಾಕೆ?ಹೇಗೆ? ಎನ್ನುವ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕೆಂದು ಕರೆ ನೀಡಿದರು.
ಶಿಕ್ಷಕಿ ಪಾರ್ವತಿ ನಾಯ್ಕ ಅವರು ಮಾತನಾಡಿ ಆಧುನಿಕ ಮೊಬೈಲ್ ಯುಗದಲ್ಲಿ ಬೀಜ ಬಿತ್ತೊತ್ಸವ ಎಂದರೇನು? ಗಿಡ ನೆಡುವುದು ಮತ್ತು ಬೆಳೆಸುವುದರ ಬಗ್ಗೆ ಮಕ್ಕಳಿಗೆ ಉತ್ತಮ ಮಾಹಿತಿಯನ್ನು ಅರಣ್ಯ ಇಲಾಖೆ ನೀಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದೆ ಎಂದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಪ್ರಭಾ ಆಳ್ಕೆ , ರಾಜಶೇಖರ ಕಟಗೇರಿ, ಮಧು ಹೊನ್ನಾಳಿ , ಅಶೋಕ್ ಕಾಂಬಳೆ , ಕೃಷ್ಣ ಎಡಗೆ , ಬಸವರಾಜ್ ಹಾವೇರಿ , ಶರತ್ , ಮಂಜುನಾಥ, ಸಿದ್ದೇಶ್ವರ ಕುಬಸದ ಇತರರು ಉಪಸ್ಥಿತರಿದ್ದರು.
ಶಾಲೆಯ ಆವರಣ ಹಾಗೂ ಅಕ್ಕ ಪಕ್ಕದಲ್ಲಿ ಗಿಡ ನೆಡುವರ ಜೊತೆಯಲ್ಲಿ ಬೀಜದ ಉಂಡೆಗಳನ್ನು ಬಿತ್ತಲಾಯ್ತು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.