ಮನುಷ್ಯನಿಗೆ ಹುಚ್ಚು ಇರಬೇಕು, ಆದರೆ ಬದುಕನ್ನೇ ತೊಡಕು ಮಾಡಿಕೊಳ್ಳುವಷ್ಟು ಅಲ್ಲ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ನಲ್ಲಿರುವ ಮಹಿಳೆಯನ್ನು ಗಮನಿಸಿ. ಹಚ್ಚೆಪ್ರಿಯಳಾದ ಈಕೆ ಈತನಕ ಒಂದಲ್ಲ ಹತ್ತಲ್ಲ ಬರೋಬ್ಬರಿ 800 ಹಚ್ಚೆಗಳನ್ನು ತನ್ನ ಮೈಮುಖದ ಮೇಲೆ ಹಾಕಿಸಿಕೊಂಡಿದ್ದಾಳೆ. ಆದರೆ ಈ ‘ಹಚ್ಚೆಯ ಚಟ’ ದಿಂದಾಗಿಯೇ ಆಕೆ ನಿರುದ್ಯೋಗವನ್ನು ಅನುಭವಿಸುವಂತಾಗಿದೆ. ಕೆಲಸ ಕೇಳಿಕೊಂಡು ಹೋದಲ್ಲೆಲ್ಲ ಆಕೆಯ ಹಚ್ಚೆಗಳ ಬಗ್ಗೆಯೇ ಟೀಕಿಸುತ್ತಾರೆ ವಿನಾ ಯಾರೊಬ್ಬರೂ ಈಕೆಗೆ ಕೆಲಸ ಕೊಡುತ್ತಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಈಕೆಯ ಪರಿಸ್ಥಿತಿ.
ನ್ಯೂಯಾರ್ಕ್ ಪೋಸ್ಟ್ನ ವರದಿಯಂತೆ, ಲಂಡನ್ನ ವೇಲ್ಸ್ನಲ್ಲಿ 46 ವರ್ಷದ ಈ ಮೆಲಿಸ್ಸಾ ಸ್ಲೋನ್ ನೆಲೆಸಿದ್ದಾಳೆ. ಈಕೆಗೆ ಎರಡು ಮುದ್ದಾದ ಹೆಣ್ಣುಮಕ್ಕಳೂ ಇವೆ. ಆದರೆ ಕೆಲಸವಿಲ್ಲದೆ ಇದೀಗ ಒದ್ಧಾಡುತ್ತಿದ್ದಾಳೆ. ”ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನಾನು ಅರ್ಜಿ ಸಲ್ಲಿಸಿದಾಗ, ಹಚ್ಚೆಗಳನ್ನು ನೋಡಿಯೇ ನನಗೆ ಕೆಲಸ ಕೊಡಲಿಲ್ಲ ಎನ್ನುವುದು ಒಂದು ಕಡೆಯಾದರೆ, ನೀನಗೆ ಈ ಕೆಲಸದ ಅನುಭವವೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಈ ಹಿಂದೆ ನನಗೆ ಕೆಲಸ ಮಾಡಿದ ಅನುಭವವಿದೆ, ಆದರೆ ಹೆಚ್ಚು ಕಾಲ ನಾನಲ್ಲಿ ಇರಲಿಲ್ಲ” ಎನ್ನುತ್ತಾಳೆ ಈಕೆ.